ಹೊಸ ವರ್ಷದಿಂದ ಡುಕಾಟಿ ಬೈಕ್ ಬೆಲೆ ಭಾರೀ ಏರಿಕೆ

ಭಾರತದಲ್ಲಿ ಉತ್ಪಾದನೆ ಹಾಗೂ ಇನ್‌ಪುಟ್ ವೆಚ್ಚ ಏರಿಕೆಯಿಂದ ವಿವಿಧ ವಾಹನ ತಯಾರಿಕಾ ಕಂಪನಿಗಳು ತಮ್ಮ ದ್ವಿಚಕ್ರ ಹಾಗೂ ಕಾರಿನ ಬೆಲೆಯನ್ನು ಏರಿಕೆ ಮಾಡುತ್ತಿದ್ದಾರೆ. ನೂತನ ದರಗಳು ಹೊಸ ವರ್ಷದಿಂದ ಜಾರಿಗೆ ಬರಲಿವೆ. ಸದ್ಯ ಈ ಸಾಲಿಗೆ ವಿದೇಶಿ ಮೋಟಾರ್‌ಸೈಕಲ್ ತಯಾರಿಕ ಕಂಪನಿ 'ಡುಕಾಟಿ' ಸಹ ಸೇರಿದೆ.

ಡುಕಾಟಿ ಇಂಡಿಯಾ ಇತ್ತೀಚೆಗೆ ತನ್ನ ಮೋಟಾರ್‌ಸೈಕಲ್ ಮಾದರಿಗಳ ಬೆಲೆಯನ್ನು ಜನವರಿ 1, 2023 ರಿಂದ ಹೆಚ್ಚಿಸುವುದಾಗಿ ಘೋಷಿಸಿತ್ತು. ಈ ದರ ಹೆಚ್ಚಳವು ಮೋಟಾರ್‌ಸೈಕಲ್‌ಗಳ ಎಕ್ಸ್-ಶೋ ರೂಂ ಬೆಲೆ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೆಲವು ಸಮಯದಿಂದ ಯಾವುದೇ ಬೆಲೆ ಏರಿಕೆ ಮಾಡಿಲ್ಲ. ಆದರೆ, ಇದೀಗ ಉತ್ಪಾದನೆ, ಕಚ್ಚಾ ಸಾಮಗ್ರಿಗಳು ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳಲ್ಲಿ ಗಣನೀಯ ಏರಿಕೆಯ ಕಾರಣ ಬೆಲೆಗಳನ್ನು ಪರಿಷ್ಕರಿಸಬೇಕಾಗಿದೆ ಎಂದು ಕಂಪನಿ ಹೇಳಿದೆ.

ಪರಿಷ್ಕೃತ ಬೆಲೆಗಳು ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಪುಣೆ, ಕೊಚ್ಚಿ, ಕೋಲ್ಕತ್ತಾ ಮತ್ತು ಹೈದರಾಬಾದ್‌ನಂತಹ ಎಲ್ಲಾ ಅಧಿಕೃತ ಡುಕಾಟಿ ಡೀಲರ್‌ಶಿಪ್‌ಗಳಿಗೆ ಅನ್ವಯಿಸುತ್ತವೆ ಎಂದು ಕಂಪನಿ ಮಾಹಿತಿ ನೀಡಿದೆ. ಡುಕಾಟಿ ಜೊತೆಗೆ ಮಾರುತಿ ಸುಜುಕಿ, ಹ್ಯುಂಡೈ, ಜೀಪ್ ಮತ್ತು ಇತರೆ ಬ್ರಾಂಡ್‌ಗಳು ಕೂಡ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳ ಕಾರಣದಿಂದಾಗಿ ತಮ್ಮ ಮಾದರಿಗಳ ಬೆಲೆ ಏರಿಕೆಯನ್ನು ಘೋಷಿಸಿವೆ. ಆದರೆ, ಇಟಾಲಿಯನ್ ಸೂಪರ್ ಬೈಕ್ ತಯಾರಕರಾಗಿರುವ ಡುಕಾಟಿ, ಯಾವ ಮಾದರಿ ಮೇಲೆ ಎಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಲಾಗಿದೆ ಎಂಬುದರ ಬಗ್ಗೆ ಇನ್ನೂ ಬಹಿರಂಗಪಡಿಸಿಲ್ಲ.

ಇತ್ತೀಚೆಗೆ, ಡುಕಾಟಿ ಇಂಡಿಯಾ ಭಾರತೀಯ ಮಾರುಕಟ್ಟೆಯಲ್ಲಿ 'ಡೆಸರ್ಟ್ ಎಕ್ಸ್ ಅಡ್ವೆಂಚರ್' ಮೋಟಾರ್‌ಸೈಕಲ್ ಅನ್ನು ರೂ .17.91 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಿದೆ (ಎಕ್ಸ್ ಶೋ ರೂಂ). ಕಂಪನಿಯು ಈಗಾಗಲೇ ಡುಕಾಟಿ ಡೆಸರ್ಟ್ ಎಕ್ಸ್ ಬುಕಿಂಗ್ ಅನ್ನು ಪ್ರಾರಂಭಿಸಿದ್ದು, ಅದರ ವಿತರಣೆಗಳು 2023 ರ ಆರಂಭದಲ್ಲಿ ಪ್ರಾರಂಭವಾಗಲಿದೆ. ಇದು ಡುಕಾಟಿ ಮಲ್ಟಿಸ್ಟ್ರಾಡಾ ವಿ2 ಬೆಲೆಗಿಂತ ಕೊಂಚ ಹೆಚ್ಚು ಆಗಿದೆ (ಎಕ್ಸ್ ಶೋ ರೂಂ ಬೆಲೆ ರೂ.15.49 ಲಕ್ಷ).

ಡುಕಾಟಿ ಡೆಸರ್ಟ್ ಎಕ್ಸ್ ಎಂಜಿನ್ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, 937 ಸಿಸಿ ಲಿಕ್ವಿಡ್-ಕೂಲ್ಡ್ ಫ್ಯೂಯಲ್-ಇಂಜೆಕ್ಟೆಡ್ ಟೆಸ್ಟಾಸ್ಟ್ರೆಟ್ಟಾ ಎಂಜಿನ್‌ನಿಂದ ಚಾಲಿತವಾಗಿದ್ದು, 9,250 ಆರ್‌ಪಿಎಂನಲ್ಲಿ 108.5 ಬಿಹೆಚ್‌ಪಿ ಗರಿಷ್ಠ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 92 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 6-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ ಜೊತೆಗೆ ಆಫ್-ರೋಡ್ ರೈಡಿಂಗ್‌ಗಾಗಿ ಶಾರ್ಟ್ ಫಸ್ಟ್ ಮತ್ತು ಸೆಕೆಂಡ್ ಗೇರ್‌ನೊಂದಿಗೆ ಖರೀದಿಗೆ ಲಭ್ಯವಿದೆ ಎಂದು ಹೇಳಬಹುದು.

ಡುಕಾಟಿ ಡೆಸರ್ಟ್ ಎಕ್ಸ್ ಆರು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಸ್ಪೋರ್ಟ್, ಟೂರಿಂಗ್, ಅರ್ಬನ್, ವೆಟ್, ಎಂಡ್ಯೂರೋ ಮತ್ತು ರ‍್ಯಾಲಿ. ಇವುಗಳಲ್ಲಿ, ಮೊದಲ ನಾಲ್ಕು ರೈಡಿಂಗ್ ಮೋಡ್‌ಗಳನ್ನು ದೈನಂದಿನ ಪ್ರಯಾಣಕ್ಕಾಗಿ, ಕೊನೆಯ ಎರಡು ರೈಡಿಂಗ್ ಮೋಡ್‌ಗಳನ್ನು ಆಫ್-ರೋಡ್ ರೈಡಿಂಗ್‌ಗಾಗಿ ವಿನ್ಯಾಸಗೊಳಿಸಲಾಗಿದೆ. ಟ್ರಾಕ್ಷನ್ ಕಂಟ್ರೋಲ್, ವೀಲಿ ಕಂಟ್ರೋಲ್, ಕಾರ್ನರಿಂಗ್ ಎಬಿಎಸ್, ಎಂಜಿನ್ ಬ್ರೇಕ್ ಕಂಟ್ರೋಲ್, ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್, ಎಲ್‌ಇಡಿ ಡಿಆರ್‌ಎಲ್‌ಗಳೊಂದಿಗೆ ಫುಲ್ ಎಲ್‌ಇಡಿ ಲೈಟಿಂಗ್ ನಂತಹ ವೈಶಿಷ್ಟ್ಯಳನ್ನು ಹೊಂದಿದೆ.

ಇಷ್ಟೇಅಲ್ಲದೆ, ದೇಶೀಯ ಮಾರುಕಟ್ಟೆಯಲ್ಲಿ ಸ್ವದೇಶಿ ಹಾಗೂ ವಿದೇಶಿ ಕಂಪನಿಗಳು ಸಹ ದರ ಏರಿಕೆ ಮಾಡುತ್ತಿವೆ. 'ಕಿಯಾ' ತನ್ನ ಕಾರುಗಳ ಬೆಲೆಗಳನ್ನು ರೂ.50,000 ದವರೆಗೆ ಹೆಚ್ಚಿಸುವುದಾಗಿ ತಿಳಿಸಿದೆ. ಸಿಟ್ರೊಯೆನ್ ಸಿ3 ಕಾಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಮತ್ತು ಸಿ5 ಏರ್‌ಕ್ರಾಸ್ ಪ್ರೀಮಿಯಂ ಎಸ್‌ಯುವಿ ಬೆಲೆಗಳನ್ನು 1.5-2% ಏರಿಕೆ ಮಾಡಲಿದೆ. ಎಂಜಿ ಕಂಪನಿಯು ಹೊಸ ವರ್ಷದಿಂದ ತನ್ನೆಲ್ಲ ಕಾರುಗಳ ಬೆಲೆಗಳನ್ನು 90,000 ರೂ. ಏರಿಕೆ ಮಾಡುವುದಾಗಿ ಘೋಷಿಸಿದೆ. ಟಾರ್ಕ್ ಮೋಟಾರ್ಸ್ ತನ್ನ ಎರಡು ಎಲೆಕ್ಟ್ರಿಕ್ ಬೈಕ್‌ ದರವನ್ನು ರೂ.10,000 ಏರಿಸಲಿದೆ.

ಕಂಪನಿಗಳು ತಮ್ಮ ವೆಚ್ಚ ನಿರ್ವಹಣೆ ಮಾಡಲು ಬೆಲೆ ಏರಿಕೆ ಮಾಡುತ್ತಿವೆ. ಆದರೆ, ಇದು ಭಾರತದಂತಹ ಮಧ್ಯಮ ವರ್ಗದ ಜನರು ವಾಸಿಸುವ ದೇಶದಲ್ಲಿ ತೀವ್ರ ಪರಿಣಾಮ ಬೀರುತ್ತದೆ. ದುಬಾರಿ ಬೆಲೆಯ ವಾಹನ ಖರೀದಿಸುವ ಗ್ರಾಹಕರಿಗೆ ಅಷ್ಟಾಗಿ ತೊಂದರೆಯಾಗುವುದಿಲ್ಲ. ಬಹುತೇಕ ಕಂಪನಿಗಳು ನೂತನ ವಾಹನಗಳ ಬೆಲೆಯನ್ನು ಏರಿಕೆ ಮಾಡುತ್ತೇವೆ ಎಂದು ಹೇಳಿವೆ. ಆದರೆ, ಅದು ಎಷ್ಟಿರುತ್ತದೆ ಎಂಬುದನ್ನು ಈವರೆಗೆ ಘೋಷಿಸಿಲ್ಲ. ಅದಕ್ಕಾಗಿ ಹೊಸ ವರ್ಷದವರೆಗೆ ಕಾಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ.

Most Read Articles

Kannada
Read more on ಡುಕಾಟಿ ducati
English summary
Ducati bike price has increased drastically since the new year
Story first published: Tuesday, December 20, 2022, 11:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X