ಅಗ್ಗದ ಡುಕಾಟಿ 803 ಸಿಸಿ ಸೂಪರ್ ಬೈಕ್ ಬಂದಿದೆ!
ಡುಕಾಟಿ ಬೈಕುಗಳು ಯಾವತ್ತೂ ದುಬಾರಿ. ಹತ್ತು ಲಕ್ಷ ರುಪಾಯಿಗಿಂತ ಕಡಿಮೆಗೆ ಕಂಪನಿಯ ಬೈಕ್ ಹೊಂದುವುದು ಕಷ್ಟ. ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ವಾಹನ ಪ್ರದರ್ಶನದಲ್ಲಿ ಡುಕಾಟಿ ನೂತನ "ಮಾನ್ಸಾಟರ್ 795" ಬೈಕೊಂದನ್ನು ಹೊರತಂದಿದೆ. ಕಂಪನಿಯ ಇತರ ಬೈಕುಗಳಿಗೆ ಹೋಲಿಸಿದರೆ ಇದು ಅಗ್ಗ. ಇದರ ದರ 6.99 ಲಕ್ಷ ರುಪಾಯಿ.

ಇಟಲಿಯ ಬೈಕ್ ತಯಾರಿಕಾ ಕಂಪನಿ ಡುಕಾಟಿ ಪರಿಚಯಿಸಿದ ನೂತನ ಡುಕಾಟಿ ಮಾನ್ಸಾಟರ್ 795 ಬೈಕಿನ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ಈ ಬೈಕಿನ ಡೆಲಿವರಿ ಪ್ರಸಕ್ತ ವರ್ಷದ ಮಾರ್ಚ್ ತಿಂಗಳಿನಿಂದ ಆರಂಭವಾಗಲಿದೆ.
ಈ ಬೈಕನ್ನು ಕಂಪನಿಯ ಥೈಲಾಂಡ್ ಘಟಕದಲ್ಲಿ ಉತ್ಪಾದಿಸಲಾಗುತ್ತದೆ. ಇಲ್ಲಿಂದ ದೇಶಕ್ಕೆ ಆಮದು ಮಾಡಿಕೊಳ್ಳುವುದು ಕಂಪನಿಗೆ ಸುಲಭ. ಜೊತೆಗೆ ಆಮದು ಸುಂಕವೂ ಕಡಿಮೆ. ಹೀಗಾಗಿ ನೂತನ ಡುಕಾಟಿ ಬೈಕ್ ದರ ಕೊಂಚ ಕಡಿಮೆಯಾಗಿದೆ.
ಮಾನ್ಸಾಟರ್ 795 ಬೈಕ್ 803 ಸಿಸಿಯ ವಿ-ಟ್ವಿನ್ ಎಂಜಿನ್ ಹೊಂದಿದ್ದು, 87 ಅಶ್ವಶಕ್ತಿ ಮತ್ತು 78 ಎನ್ಎಂ ಟಾರ್ಕ್ ಪವರ್ ನೀಡುತ್ತದೆ. ನೂತನ ಬೈಕ್ ನೋಡಲು ಟ್ರಯಂಪ್ ಕಂಪನಿಯ ಸ್ಪೀಡ್ ಟ್ರಿಪಲ್, ಹ್ಯೊಸಂಗ್ ಕಂಪನಿಯ ಕಮೆಟ್ ಜಿಟಿ650ಎನ್ ಮತ್ತು ಕವಾಸಕಿ ನಿಂಜಾ 650 ಬೈಕಿನಂತೆ ಕಾಣುತ್ತದೆ.


Click it and Unblock the Notifications








