ಎರಡು ಬೈಕ್ ಮತ್ತು ಒಂದು ಸ್ಕೂಟರ್ ಹೊರತಂದ ಹೀರೋ
ನವದೆಹಲಿ, ಜ 04: ಹೋಂಡಾಕ್ಕೆ ವಿಚ್ಛೇದನ ನೀಡಿದ ನಂತರದ ಪರ್ವದಲ್ಲಿ ಹೀರೋ ಮೊಟೊಕಾರ್ಪ್ ನೂತನ ಎರಡು ಬೈಕ್ ಮತ್ತು ಒಂದು ಸ್ಕೂಟರನ್ನು ಅನಾವರಣ ಮಾಡಿದೆ. ದೆಹಲಿ ವಾಹನ ಪ್ರದರ್ಶನಕ್ಕೆ ಮುನ್ನದಿನ ಅನಾವರಣ ಮಾಡಿದ ಈ ಮಾಡೆಲ್ ಗಳ ಕುರಿತು ಕಂಪನಿ ಹೆಚ್ಚು ಆಶಾದಾಯಕತೆ ಹೊಂದಿದೆ.

ಕಂಪನಿಯು 100ಸಿಸಿಯ ಪ್ಯಾಷನ್ ಎಕ್ ಪ್ರೊ ಮತ್ತು 125 ಸಿಸಿ ಬೈಕ್ ಇಗ್ನಿಟರನ್ನು ಪರಿಚಯಿಸಿದೆ. ಜೊತೆಗೆ 110 ಸಿಸಿಯ ಮ್ಯಾಸ್ಟ್ರೊ ಎಂಬ ಸ್ಕೂಟರನ್ನು ಅನಾವರಣ ಮಾಡಿದೆ. ಈ ಮೂರು ಮಾಡೆಲುಗಳ ದರ ಮಾಹಿತಿಯನ್ನು ಕಂಪನಿ ಇನ್ನೂ ಪ್ರಕಟಿಸಿಲ್ಲ.
ಇದರಲ್ಲಿ ಮ್ಯಾಸ್ಟ್ರೊ ಸ್ಕೂಟರ್ ಈ ತಿಂಗಳಲ್ಲಿಯೇ ರಸ್ತೆಗಿಳಿಯಲಿದೆ. ಉಳಿದೆರಡು ಬೈಕುಗಳು ರಸ್ತೆಗಿಳಿಯಲು ಮುಂದಿನ ವರ್ಷದವರೆಗೆ ಕಾಯಬೇಕಿದೆ.
"ಇವು ಕೇವಲ ನೂತನ ಉತ್ಪನ್ನಗಳಲ್ಲ, ಕಂಪನಿಯ ಕಾರ್ಯತಂತ್ರ, ಮುನ್ನೋಟ ಮತ್ತು ಭವಿಷ್ಯದಲ್ಲಿ ಕಂಪನಿ ಸಾಗಲಿರುವ ಹಾದಿಯ ಕುರಿತಾದ ಅಡಿಗಲ್ಲುಗಳಾಗಿವೆ" ಎಂದು ಹೀರೋ ಮೊಟೊಕಾರ್ಪ್ ವ್ಯವಸ್ಥಾಪಕ ನಿರ್ದೇಶಕರಾದ ಪವನ್ ಮುಂಜಾಲ್ ಹೇಳಿದ್ದಾರೆ.
ಸುಮಾರು ಹದಿನೆಂಟರಿಂದ 24 ವರ್ಷ ವಯಸ್ಸಿನ ಪುರುಷ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಮ್ಯಾಸ್ಟ್ರೊ ಸ್ಕೂಟರ್ ನ್ನು ಹೊರತರಲಾಗಿದೆ ಎಂದು ಮುಂಜಾಲ್ ಹೇಳಿದ್ದಾರೆ. 2011ರ ವರ್ಷದ್ಲಿ ಕಂಪನಿಯು 60 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. (ಕನ್ನಡ ಡ್ರೈವ್ ಸ್ಪಾರ್ಕ್)


Click it and Unblock the Notifications








