ನೂತನ ಟಿವಿಎಸ್ ಅಪಾಚಿ ವಿಮರ್ಶೆ; ಮೋಜು, ಮಸ್ತಿಯ ರೇಸಿಂಗ್ ಥ್ರಿಲ್ಲರ್ ಬೈಕ್

By Nagaraja

1980ರ ದಶಕದ ಆರಂಭಿಕ ಕಾಲಘಟ್ಟದಲ್ಲಿ ಸುಜುಕಿ ಮೋಟಾರ್ ಕಾರ್ಪೋರೇಷನ್ ಸಹಭಾಗಿತ್ವದಲ್ಲಿ ಎರಡು ಸೀಟುಗಳ ಮೊಪೆಡ್ ವಾಹನವನ್ನು ಪರಿಚಯಿಸಿರುವ ಟಿವಿಎಸ್ ಈಗ ದೇಶದ ಮುಂಚೂಣಿಯ ದ್ವಿಚಕ್ರ ವಾಹನ ಸಂಸ್ಥೆಗಳ ಸಾಲಿನಲ್ಲಿ ಗುರುತಿಸಿಕೊಂಡಿದೆ. ಬಳಿಕ ಸುಜುಕಿ ಜೊತೆಗೂಡಿ ಸಮುರಾಯ್, ಶೊಗನ್ ಮತ್ತು ಫಿಯರೊ ಮಾದರಿಗಳನ್ನು ಬಿಡುಗಡೆ ಮಾಡಿರುವ ಟಿವಿಎಸ್ 2001ನೇ ಸಾಲಿನಲ್ಲಿ ಸುಜುಕಿ ಜೊತೆಗಿನ ಬಾಂಧವ್ಯವನ್ನು ಕಡಿತುಕೊಂಡಿತ್ತಲ್ಲದೆ ತದಾ ಬಳಿಕ ಟಿವಿಎಸ್ ಮೋಟಾರ್ ಎಂದು ಹೆಸರಿಸಿಕೊಂಡಿತ್ತು.

'ಅಪಾಚಿ' ಶ್ರೇಣಿಯ ಬೈಕ್ ಗಳನ್ನು 2006ನೇ ಸಾಲಿನಲ್ಲಿ ಪರಿಚಯಿಸಿರುವ ಟಿವಿಎಸ್ ಬಹುಬೇಗನೇ ಕ್ರೀಡಾ ಬಳಕೆಯ ದ್ವಿಚಕ್ರ ವಾಹನ ವಿಭಾಗದಲ್ಲಿ ಜನಪ್ರಿಯತೆ ಸಾಧಿಸಿತ್ತು. ರೇಸಿಂಗ್ ಶೈಲಿಯ ಅಪಾಚಿ ಬೈಕ್ ಯುವ ಸವಾರರಲ್ಲಿ ಹೊಸ ಉತ್ಸಾಹವನ್ನು ಬೀರಿತ್ತು. ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧೆ ಹೆಚ್ಚಿದಂತೆ ತನ್ನ ಅಪಾಚಿ ಬೈಕ್ ಗೆ ಹೊಸ ಕಳೆ ಮೂಡಿಸುವ ಇರಾದೆಯಲ್ಲಿರುವ ಟಿವಿಎಸ್ ನೂತನ ಅಪಾಚಿ 200 4 ವಿ ಬೈಕ್ ಬಿಡುಗಡೆ ಮಾಡುವ ಮುಖಾಂತರ ಮರು ಜೀವ ತುಂಬಿದೆ.

ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ

ಏನಿದು ಆರ್‌ಟಿಆರ್?
ಬಹುತೇಕ ಮಂದಿಗೆ ಟಿವಿಎಸ್ ಅಪಾಚಿ ಎಂಬುದು ತಿಳಿದಿದೆ. ಆದರೆ ಕೊನೆಯಲ್ಲಿರುವ ಆರ್‌ಟಿಆರ್ ಏನೆಂಬುದು ಗೊಂದಲಕ್ಕೀಡಾ ಮಾಡುತ್ತಿದೆ. ಟಿವಿಎಸ್ ಆರ್‌ಟಿಆರ್ ಎಂಬುದರ ಪೂರ್ಣ ರೂಪ 'ರೇಸಿಂಗ್ ಥ್ರಾಟಲ್ ರೆಸ್ಪಾನ್ಸ್' ( Racing Throttle Response) ಎಂದಾಗಿದೆ.

ಟೆಸ್ಟಿಂಗ್ ಮಾಡಿದ ಮಾಡೆಲ್: ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಫ್ಯೂಯಲ್ ಇಂಜೆಕ್ಷನ್ (FI)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಟಿವಿಎಸ್ ಆರ್‌ಟಿಆರ್ 200 4ವಿ (ಕಾರ್ಬ್ಯೂರೇಟರ್): 88,990 ಲಕ್ಷ ರು.
  • ಟಿವಿಎಸ್ ಆರ್‌ಟಿಆರ್ 200 4ವಿ (ಫ್ಯೂಯಲ್ ಇಂಜೆಕ್ಷನ್): 1,07,000 ಲಕ್ಷ ರು.
ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ

ವಿನ್ಯಾಸ
ದೈನಂದಿನ ರೇಸಿಂಗ್ ಎಂಬುದು ಅಪಾಚಿ ಆರ್‌ಟಿಆರ್ 200 4ವಿ ಬೈಕ್‌ಗೆ ಹೆಚ್ಚು ಸೂಕ್ತವೆನಿಸುತ್ತದೆ. ಮೊದಲ ನೋಟದಲ್ಲೇ ನಿಖರವಾದ ಕೋನಿಯ ಸ್ವಭಾವ ರೇಖೆಗಳು ಗಮನ ಸೆಳೆಯುತ್ತದೆ. ಹಳೆಯ ಅಪಾಚಿಯಿಂದ ಪ್ರೇರಣೆ ಪಡೆದುಕೊಂಡು ನೂತನ ಮಾದರಿಗೂ ಹೆಚ್ಚು ಕ್ರೀಡಾತ್ಮಕ ವಿನ್ಯಾಸವನ್ನು ಮೈಗೂಡಿಸಿಕೊಳ್ಳಲಾಗಿದೆ. ಆಕ್ರಮಣಕಾರಿ ಟ್ಯಾಂಕ್, ವಿಭಜಿತ ಸೀಟು, ಎಂಜಿನ್ ಮುಸುಕು, ಅಲಾಯ್ ವೀಲ್ ಮತ್ತು ವಿಶಿಷ್ಟ ವಿನ್ಯಾಸದ ಹೆಡ್ ಲ್ಯಾಂಪ್ ಗಳನ್ನು ನೀವು ಕಾಣಬಹುದಾಗಿದೆ.

2014 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡಿರುವ ಡ್ರೇಕನ್ ಕಾನ್ಸೆಪ್ಟ್ ನಿಂದಲೂ ಸ್ಪೂರ್ತಿ ಪಡೆಯಲಾಗಿದೆ. ಇನ್ನುಳಿದಂತೆ ಕಣ್ಣು ಕುಕ್ಕುವಂತಹ ಡೇ ಟೈಮ್ ರನ್ನಿಂಗ್ ಲೈಟ್ಸ್, ಎಕ್ಸಾಸ್ಟ್ ಮತ್ತು ಕ್ರೀಡಾತ್ಮಕ ಸಾನಿಧ್ಯ ಪ್ರಮುಖ ಆಕರ್ಷಣೆಯಾಗಿದೆ.

ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ

ಎಂಜಿನ್ ತಾಂತ್ರಿಕತೆ

ಎಂಜಿನ್: ಸಿಂಗಲ್ ಸಿಲಿಂಡರ್, ಫೋರ್ ಸ್ಟ್ರೋಕ್
ಸಾಮರ್ಥ್ಯ: 197.9 ಸಿಸಿ
ಕೂಲಿಂಗ್: ಒಯಿಲ್ ಮತ್ತು ಏರ್ ಕೂಲ್ಡ್
ಪವರ್: 21 ಅಶ್ವಶಕ್ತಿ
ತಿರುಗುಬಲ: 18 ಎನ್‌ಎಂ
ಗೇರ್ ಬಾಕ್ಸ್: 5 ಸ್ಪೀಡ್ ಮ್ಯಾನುವಲ್
ವೇಗ ವರ್ಧನೆ (ಗಂಟೆಗೆ 0-60 ಕೀ.ಮೀ.): 3.9 ಸೆಕೆಂಡು

ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ
ಚಾಲನಾ ಸ್ಥಾನ
ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಬೈಕ್ ಗೆ ಹತ್ತಿದಾಗ ಮೊದಲು ಗಮನಕ್ಕೆ ಬರುವುದು ಹೊಂದೆಕೆಯಾಗುವ ಚಾಲನಾ ಸ್ಥಾನ. 5.5ರಿಂದ ಆರು ಆಡಿ ಎತ್ತರಕ್ಕಿಂತಲೂ ಹೆಚ್ಚಿನ ದೇಹ ಕಾಯದ ವ್ಯಕ್ತಿಗಳಿಗೂ ಇದು ಸೂಕ್ತವೆನಿಸಲಿದೆ. ಇದು ಚಾಲನಾ ವೇಳೆ ಸವಾರರಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬಲಿದೆ.

ಒಮ್ಮೆ ಕೀ ಹಾಕಿ ಗಾಡಿ ಸ್ಟ್ಯಾರ್ಟ್ ಮಾಡಿದಾಗ ಸಂಪೂರ್ಣವಾದ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಿಮ್ಮನ್ನು ಚಾಲನೆಗಾಗಿ ಸ್ವಾಗತಿಸಲಿದೆ. ಒಂದು ರೇಸಿಂಗ್ ಬೈಕ್ ನಲ್ಲಿರುವಂತಹ ಎಕ್ಸಾಸ್ಟ್ ಶಬ್ದವು ನಿಮ್ಮನ್ನು ರೇಸಿಂಗ್ ಗಾಗಿ ಸಿದ್ಧಗೊಳಿಸಲಿದ್ದು, ಹೊಸ ಚೈತನ್ಯ ತುಂಬಲಿದೆ.

ಸಸ್ಪೆನ್ಷನ್ ವ್ಯವಸ್ಥೆಯು ಪರಿಣಾಮಕಾರಿ ಎನಿಸಿಕೊಂಡಿದ್ದು, ಹ್ಯಾಂಡಲ್ ಬಾರ್ ಸ್ಥಾನವು ತಿರುವುಗಳಲ್ಲೂ ಅತ್ಯುತ್ತಮ ಆತ್ಮವಿಶ್ವಾಸದೊಂದಿಗೆ ಚಾಲನೆ ಮಾಡಲು ಪ್ರೋತ್ಸಾಹಿಸಲಿದೆ. ತೆರೆದ ಹೆದ್ದಾರಿಗಳಲ್ಲಿ ಗಂಟೆಗೆ 90ರಿಂದ 100 ಕೀ.ಮೀ. ವೇಗದಲ್ಲಿ ಸಾಗಲು ಪ್ರೇರೇಪಿಸಲಿದೆ. ವೈಬ್ರೇಷನ್ ತೊಂದರೆಯು ಇರದಿರುವುದರಿಂದ ಆಕ್ಸಿಲೇಟರ್ ಕೊಡಲು ಮತ್ತಷ್ಟು ಉತ್ಸಾಹದಾಯಕವಾಗಲಿದೆ.


ಇಲ್ಲಿ ಗಮನಕ್ಕೆ ಬಂದಿರುವ ಮಗದೊಂದು ಅಂಶವೆಂದರೆ ಎಂಜಿನ್ ಗೇರ್ ಬಾಕ್ಸ್ ನಯವಾಗಿ ಕೆಲಸ ಮಾಡುವುದರಿಂದ ವೇಗವಾಗಿ ಚಲಿಸುವಾಗ ಆರು ಸ್ಪೀಡ್ ಗೇರ್ ಬಾಕ್ಸ್ ಗಳ ಅಗತ್ಯ ಬರುತ್ತದೆ. ಈ ನಿಟ್ಟಿನಲ್ಲಿ ಭವಿಷ್ಯದಲ್ಲಿ ಟಿವಿಎಸ್ ಕೆಲಸ ಮಾಡಲಿದೆ ಎಂಬ ವಿಶ್ವಾಸ ನಮ್ಮದ್ದು.

ಇತ್ತ ಕಡೆಗಳಲ್ಲೂ ಡಿಸ್ಕ್ ಬ್ರೇಕ್ ಸೌಲಭ್ಯವನ್ನು ನೀಡುವ ಮುಖಾಂತರ ಅಪಾಚಿ ಆರ್‌ಟಿಆರ್ 200 4ವಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಹಾಗಿದ್ದರೂ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಇರುತ್ತಿದ್ದಲ್ಲಿ ಮತ್ತಷ್ಟು ಪ್ರೀಮಿಯಂ ಎನಿಸಿಕೊಳ್ಳುವಲ್ಲಿ ಸಾಧ್ಯವಾಗುತ್ತಿತ್ತು.

ಏನೇ ಆದರೂ ಭಾರತೀಯ ಗ್ರಾಹಕರಲ್ಲಿ ಮೈಲೇಜ್ ಅತಿ ಮುಖ್ಯ ಘಟಕವೆನಿಸುತ್ತದೆ. ನಮ್ಮ ಚಾಲನಾ ಪರೀಕ್ಷೆಯ ವೇಳೆ ಹೆದ್ದಾರಿ ಮತ್ತು ನಗರ ಪ್ರದೇಶಗಳು ಸೇರಿದಂತೆ ಪ್ರತಿ ಲೀಟರ್ ಗೆ 30 ಕೀ.ಮೀ. ಇಂಧನ ಕ್ಷಮತೆ ಕಾಪಾಡಿಕೊಳ್ಳುವಲ್ಲಿ ಅಪಾಚಿ ಆರ್‌ಟಿಆರ್ 200 4ವಿ ಯಶಸ್ವಿಯಾಗಿದೆ.

ಮುಖ್ಯಾಂಶಗಳು
ಮೈಲೇಜ್: ಪ್ರತಿ ಲೀಟರ್‌ಗೆ 30 ಕೀ.ಮೀ.
ಇಂಧನ ಟ್ಯಾಂಕ್ ಸಾಮರ್ಥ್ಯ: 12 ಲೀಟರ್ (ರಿಸರ್ವ್ ಸೇರಿದಂತೆ)

ಬ್ರೇಕ್
ಮುಂಭಾಗ: 270 ಎಂಎಂ ಡಿಸ್ಕ್
ಹಿಂಭಾಗ: 240 ಎಂಎಂ ಡಿಸ್ಕ್

ಚಕ್ರಗಳು
ಮುಂಭಾಗ: 90/90-17 ಇಂಚು
ಹಿಂಭಾಗ: 130/90-17 ಇಂಚು

ಸಸ್ಪೆನ್ಷನ್
ಮುಂಭಾಗ: ಟೆಲಿಸ್ಕಾಪಿಕ್
ಹಿಂಭಾಗ: ಮೊನೊಶಾಕ್

ಭಾರ: 148 ಕೆ.ಜಿ.
ಸೀಟು ಎತ್ತರ: 800 ಎಂಎಂ
ಗ್ರೌಂಡ್ ಕ್ಲಿಯರನ್ಸ್: 180 ಎಂಎಂ
ಚಕ್ರಾಂತರ: 1353 ಎಂಎಂ

ಏಳು ಆಕರ್ಷಕ ಬಣ್ಣಗಳು: ಬಿಳಿ, ಕಪ್ಪು, ಮ್ಯಾಟ್ ಕೆಂಪು, ಮ್ಯಾಟ್ ಹಳದಿ, ಮ್ಯಾಟ್ ಬಿಳಿ, ಮ್ಯಾಟ್ ಕಪ್ಪು ಮತ್ತು ಮ್ಯಾಟ್ ಬೂದು.

ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ
ಇನ್ಸ್ಟ್ರುಮೆಂಟ್ ಕ್ಲಸ್ಟರ್
ನೂತನ ಅಪಾಚಿ ಆರ್‌ಟಿಆರ್ 200 4ವಿ ಬೈಕ್ ನಲ್ಲಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ವ್ಯವಸ್ಥೆಯನ್ನು ಕೊಡಲಾಗಿದೆ. ಈ ಮೂಲಕ ಚಾಲನೆ ವೇಳೆ ದೂರಮಾಪಕ, ಟ್ರಿಪ್ ಮೀಟರ್, ಸಮಯ, ಗೇರ್ ಶಿಫ್ಟ್ ಇಂಡಿಕೇಟರ್ ಮತ್ತು ಸರ್ವೀಸ್ ರಿಮೈಂಡರ್ ಬಗ್ಗೆ ಮಾಹಿತಿಗಳನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಗರಿಷ್ಠ ವೇಗ ದಾಖಲೆ, ಲ್ಯಾಪ್ ಟೈಮರ್, ಕಡಿಮೆ ದೂರ ರೆಕಾರ್ಡರ್ ಮತ್ತು ಪ್ರತಿ ಬಾರಿಯೂ ಗಾಡಿ ಆನ್ ಮಾಡಿದಾಗ ಸ್ಪೂರ್ತಿದಾಯಕ 'ರೇಸ್ ಆನ್' ಸಂದೇಶವನ್ನು ಪಡೆಯಬಹುದಾಗಿದೆ.

ಎಲೆಕ್ಟ್ರಿಕಲ್ಸ್
ಅಪಾಚಿ ಆರ್‌ಟಿಆರ್ 200 4ವಿ ಜೋಡಣೆ ಮಾಡಲಾಗಿರುವ ಎಲೆಕ್ಟ್ರಿಕಲ್ಸ್ ವ್ಯವಸ್ಥೆಯು ಪರಿಣಾಮಕಾರಿಯೆನಿಸಿಕೊಂಡಿದೆ. ಹಾಗಿದ್ದರೂ ಕೀಲಿ ಹಾಕಿದ ಬಳಿಕ ಒಂದೆರಡು ಸೆಕೆಂಡುಗಳ ಬಳಿಕಷ್ಟೇ ಗಾಡಿ ಸ್ಟ್ಯಾರ್ಟ್ ಮಾಡುವುದು ಉತ್ತಮ. ಇಲ್ಲವಾದ್ದಲ್ಲಿ ದೀರ್ಘ ಬಾಳ್ವಿಕೆಯ ವಿಚಾರದಲ್ಲಿ ಫ್ಯೂಯಲ್ ಇಂಜೆಕ್ಷನ್ ವ್ಯವಸ್ಥೆಗೆ ತೊಡಕು ಎದುರಾಗುವ ಸಂಭವವಿದೆ.

ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ

ನಿರ್ಮಾಣ ಗುಣಮಟ್ಟತೆ
ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ನಿರ್ಮಾಣ ಗುಣಮಟ್ಟತೆ ಬಗ್ಗೆಯೂ ಹೆಚ್ಚೇನು ದೂರುವಂತಿಲ್ಲ. ಹಾಗಿದ್ದರೂ ಪ್ಲಾಸ್ಟಿಕ್ ಗುಣಮಟ್ಟತೆ ಹೆಚ್ಚಿಸುವುದರಲ್ಲಿ ಸಂಸ್ಥೆಯು ಇನ್ನು ಸ್ವಲ್ಪ ಹೆಚ್ಚು ಗಮನ ಹರಿಸಿದ್ದರೆ ಉತ್ತಮವಾಗಿರುತ್ತಿತ್ತು.

ನಮಗೆ ಕಂಡುಬಂದಿರುವ ಮಗದೊಂದು ತೊಂದರೆ ಏನೆಂದರೆ ಬೈಕ್ ರನ್ನಿಂಗ್ ವೇಳೆಯಲ್ಲೇ ಸ್ಪೀಡೋಮೀಟರ್ ಸಡನ್ ಆಗಿ ಝೀರೋದಲ್ಲಿ ಬಂದು ಕುಳಿತುಕೊಳ್ಳುತ್ತದೆ. ಈ ತೊಂದರೆಯು ನಾವು ಟೆಸ್ಟಿಂಗ್ ಮಾಡಿದ ನಿರ್ದಿಷ್ಟ ಬೈಕ್ ನಲ್ಲಿ ಮಾತ್ರವೇ ಎಂಬ ಸಂದೇಹ ನಮ್ಮದಾಗಿದೆ. ಇನ್ನೊಂದೆಡೆ ಗೇರ್ ಲಿವರ್ ಮತ್ತು ಫೂಟ್ ಪೆಗ್ ನಡುವೆ ಸೈಡ್ ಸ್ಟ್ಯಾಂಡ್ ಕೊಡಲಾಗಿದ್ದು, ಸವಾರ ಗಾಡಿ ನಿಲ್ಲಿಸಿ ಸೈಡ್ ಸ್ಟ್ಯಾಂಡ್ ಹಾಕುವ ಭರದಲ್ಲಿ ಗೇರ್ ಗೆ ಕಾಲು ಅದುಮುವ ಅಪಾಯವಿದೆ. ಇವೆಲ್ಲವನ್ನು ಹೊರತುಪಡಿಸಿದರೆ ಅತ್ಯುತ್ತಮ ಉತ್ಪನ್ನವನ್ನು ನಿರ್ಮಿಸುವಲ್ಲಿ ಟಿವಿಎಸ್ ಯಶ ಕಂಡಿದೆ.

ಮುನ್ನಡೆ

  • ವಿನ್ಯಾಸ,
  • ನಯವಾದ ಎಂಜಿನ್,
  • ನಿರ್ವಹಣೆ,
  • ಗೇರ್ ಬಾಕ್ಸ್,
  • ಹ್ಯಾಂಡ್ಲಿಂಗ್

ಹಿನ್ನಡೆ

  • ಪ್ಲಾಸ್ಟಿಕ್ ಗುಣಮಟ್ಟ,
  • ಆರನೇ ಗೇರ್ ಬಾಕ್ಸ್ ನ ಕೊರತೆ,
  • ಸೈಡ್ ಸ್ಟ್ಯಾಂಡ್ ಇಂಡಿಕೇಟರ್‌ನ ಅಭಾವ,
  • ಸೈಡ್ ಸ್ಟ್ಯಾಂಡ್ ಸ್ಥಾನ

ಪ್ರತಿಸ್ಪರ್ಧಿಗಳು
ಭಾರತ ಮಾರುಕಟ್ಟೆಯಲ್ಲಿ ನೂತನ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಪ್ರಮುಖವಾಗಿಯೂ ಕೆಟಿಎಂ ಡ್ಯೂಕ್ 200 ಸವಾಲನ್ನು ಎದುರಿಸಲಿದೆ. ಬೆಲೆಯ ವಿಚಾರದಲ್ಲಿ ಕೆಟಿಎಂ ಗೆ ನೂತನ ಅಪಾಚೆ ಟಕ್ಕರ್ ಹೊಡೆದರೂ ನಿರ್ವಹಣೆ ಮತ್ತು ಹೆಚ್ಚು ಕ್ರೀಡಾತ್ಮಕ ವಿನ್ಯಾಸ ಮತ್ತು ಮಾರುಕಟ್ಟೆಯಲ್ಲಿರುವ ಅಧಿಪತ್ಯವು ಕೆಟಿಎಂಗೆ ವರದಾನವಾಗಿದೆ.

ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ

ಅಂತಿಮ ತೀರ್ಪು
200 ಸಿಸಿ ವಿಭಾಗದಲ್ಲಿ ಕೆಟಿಎಂ ಡ್ಯೂಕ್ ಅಧಿಪತ್ಯ ಸ್ಥಾಪಿಸಿರುವುದರಿಂದ ಭಾರತ ಮಾರುಕಟ್ಟೆಯಲ್ಲಿ ನೂತನ ಅಪಾಚಿ ಆರ್‌ಟಿಆರ್ 200 4ವಿ ಪಯಣಯು ಕಬ್ಬಿಣದ ಕಡಲೆಯಂತಾಗಿದೆ. ವಿನ್ಯಾಸದ ವಿಚಾರದಲ್ಲಿ ಎರಡು ಒಂದಕ್ಕೊಂದು ವಿಶಿಷ್ಟತೆಯನ್ನು ಕಾಪಾಡಿಕೊಂಡರೂ ನಿರ್ವಹಣೆಯಲ್ಲಿ ಹೆಚ್ಚು ಶಕ್ತಿಶಾಲಿ ಎಂಜಿನ್ ಹೊಂದಿರುವ ಕೆಟಿಎಂ ಮೀರಿ ನಿಂತಿದೆ. ಹಾಗಿದ್ದರೂ ಸಂಪೂರ್ಣ ಪ್ಯಾಕೇಜ್ ಒಳಗೊಂಡಿರುವ ಟಿವಿಎಸ್ ಅಪಾಚಿ ಆರ್‌ಟಿಆರ್ 200 4ವಿ ಎಲ್ಲ ಹಂತದಲ್ಲೂ ಒಂದು ಅತ್ಯುತ್ತಮ ಉತ್ಪನ್ನವನ್ನು ಖಾತ್ರಿಪಡಿಸುತ್ತಿದೆ.

ಇದೇ ಕಾರಣಕ್ಕಾಗಿ 200 ಸಿಸಿ ವಿಭಾಗದಲ್ಲಿ ನೂತನ ಅಪಾಚಿ ಆರ್‌ಟಿಆರ್ 200 4ವಿ ಅತ್ಯುತ್ತಮ ಆಯ್ಕೆಯಾಗಿರಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಒಟ್ಟಿನಲ್ಲಿ ದೈನಂದಿನ ರೇಸಿಂಗ್ ಸವಾರಿಯ ಅನುಭೂತಿ ಗಿಟ್ಟಿಸಿಕೊಳ್ಳುವ ಗ್ರಾಹಕರಿಗೆ ಇದೊಂದು ಪರಿಪೂರ್ಣ ಚಾಲನಾ ಅನುಭವ ಖಾತ್ರಿಪಡಿಸಲಿದೆ. ಹ್ಯಾಪಿ ಡ್ರೈವಿಂಗ್!


Most Read Articles

Kannada
English summary
TVS Apache RTR 200 4V First Ride Review: No Time To Retire
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X