ರುಪಾಯಿ ಸಂಕಟ, ಕಾರು ಗ್ರಾಹಕನಿಗೆ ಬರೆ
ಟೊಯೊಟಾ ಮತ್ತು ಜನರಲ್ ಮೋಟರ್ಸ್ ಕಂಪನಿಗಳು ಶೀಘ್ರದಲ್ಲಿ ಕಾರುಗಳ ದರ ಹೆಚ್ಚಳ ಮಾಡುವ ನಿರೀಕ್ಷೆಯಿದೆ. ಮಾರುತಿ ಸುಜುಕಿ ಮತ್ತು ಹ್ಯುಂಡೈ ಮೋಟರ್ಸ್ ಕೂಡ ದರ ಹೆಚ್ಚಳದ ಕುರಿತು ಪರಿಶೀಲಿಸುತ್ತಿವೆ. ಏಪ್ರಿಲ್ ತಿಂಗಳಲ್ಲಿ ಕಾರು ಮಾರಾಟ ಕಡಿಮೆಯಾಗಿದ್ದರೂ, ರೂಪಾಯಿ ಮೌಲ್ಯ ಕುಸಿತದ ಹೊಡೆತದಿಂದ ಕಂಪನಿಗಳಿಗೆ ಕಾರು ದರ ಹೆಚ್ಚಳ ಅನಿವಾರ್ಯವಾಗಿದೆ.
ಟೊಯೊಟಾ ಮತ್ತು ಜನರಲ್ ಮೋಟರ್ಸ್ ಕಂಪನಿಗಳು ವಾಹನ ಬಿಡಿಭಾಗಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಪ್ರಮುಖವಾಗಿ ಅವಲಂಬಿಸಿಕೊಂಡಿವೆ. ಕರೆನ್ಸಿ ದರಗಳ ಏರಿಳಿತವು ಈ ಕಾರು ಕಂಪನಿಗಳಿಗೆ ಹೊಡೆತ ನೀಡುತ್ತಿದೆ.
ಯೆನ್ ಮೌಲ್ಯ ಏರಿಳಿತದಿಂದ ಟೊಯೊಟಾ ಕಂಪನಿಗೆ ಬಿಡಿಭಾಗಗಳು ದುಬಾರಿಯಾಗುತ್ತಿದೆ. ಕಂಪನಿಯು ಜೂನ್ ನಂತರ ದರ ಹೆಚ್ಚಳದ ಕುರಿತು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ. ಜೂನ್ ಒಂದರಿಂದ ಅನ್ವಯವಾಗುವಂತೆ ಜನರಲ್ ಮೋಟರ್ಸ್ ಕೂಡ ವಾಹನ ದರಗಳನ್ನು ಹೆಚ್ಚಿಸಲಿದೆ.
ಪ್ರಸಕ್ತ ವರ್ಷದ ಜನವರಿಯಿಂದಲೇ ಕಾರು ಕಂಪನಿಗಳು ದರ ಹೆಚ್ಚಿಸುತ್ತಿವೆ. ಜನವರಿಯಲ್ಲಿ ಉತ್ಪಾದನಾ ವೆಚ್ಚ ಹೆಚ್ಚಳದ ಹಿನ್ನೆಲೆಯಲ್ಲಿ ದರ ಹೆಚ್ಚಿಸಲಾಗಿತ್ತು. ಕೇಂದ್ರ ಬಜೆಟಿನಲ್ಲಿ ತೆರಿಗೆ ಹೆಚ್ಚಳ ಮಾಡಿರುವುದರಿಂದ ಮಾರ್ಚ್ ತಿಂಗಳಲ್ಲಿ ಮತ್ತೊಮ್ಮೆ ಕಾರು ದರಗಳನ್ನು ಹೆಚ್ಚಿಸಲಾಗಿತ್ತು.


Click it and Unblock the Notifications









