2016 ವೋಲ್ವೋ ಎಸ್90 ಭಾರತದಲ್ಲಿ ಬಿಡುಗಡೆ; ಬೆಲೆ 53.5 ಲಕ್ಷ ರು.
ಐಷಾರಾಮಿ ಕಾರು ವಿಭಾಗದಲ್ಲಿ ತನ್ನದೇ ಆದ ಮಾರಾಟ ವಲಯ ಕಾಪಾಡಿಕೊಂಡಿರುವ ವೋಲ್ವೋ ಮಗದೊಂದು ಆಕರ್ಷಕ ಕಾರನ್ನು ದೇಶದಲ್ಲಿ ಬಿಡುಗಡೆಗೊಳಿಸಿದೆ.
ಸ್ವಿಡನ್ ಮೂಲದ ಪ್ರತಿಷ್ಠಿತ ವಾಹನ ಸಂಸ್ಥೆ ವೋಲ್ವೋ ಇಂಡಿಯಾ, ಐಷಾರಾಮಿ ವಾಹನ ಪ್ರೇಮಿಗಳಿಗಾಗಿ ಅತಿ ನೂತನ ವೋಲ್ವೋ ಎಸ್90 ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದೆ. ಇದು ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 53.5 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

ನೂತನ ವೋಲ್ವೋ ಎಸ್90 ಸೆಡಾನ್ ಕಾರು ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಇ ಕ್ಲಾಸ್, ಆಡಿ ಎ6, ಬಿಎಂಡಬ್ಲ್ಯು 5 ಸಿರೀಸ್ ಮತ್ತು ಜಾಗ್ವಾರ್ ಎಕ್ಸ್ ಎಫ್ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ವೋಲ್ವೋ ಎಕ್ಸ್ ಸಿ90 ಕ್ರೀಡಾ ಬಳಕೆಯ ವಾಹನ ನಿರ್ಮಾಣವಾಗಿರುವ ಅದೇ ಎಸ್ ಪಿಎ ತಳಹದಿಯಲ್ಲಿ ಎಸ್90 ಸೆಡಾನ್ ಕಾರು ನಿರ್ಮಾಣಗೊಂಡಿದೆ.

4963 ಎಂಎಂ ಚಕ್ರಾಂತರವನ್ನು ಕಾಪಾಡಿಕೊಂಡಿರುವ ವೋಲ್ವೋ ಎಸ್90, ಸಂಸ್ಥೆಯ ಅತಿ ಉದ್ದದ ಸೆಡಾನ್ ಕಾರುಗಳಲ್ಲಿ ಒಂದಾಗಿದ್ದು, ಅತಿ ಹೆಚ್ಚು ಸ್ಥಳಾವಕಾಶವನ್ನು ನೀಡುತ್ತದೆ.

ಮುಂಭಾಗದಲ್ಲಿ ಬೃಹತ್ತಾದ ಫ್ರಂಟ್ ಗ್ರಿಲ್ ಜೊತೆಗೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಪ್ರಮುಖ ಆಕರ್ಷಣೆಯಾಗಲಿದೆ.

ಕ್ರೋಮ್ ಸ್ಪರ್ಶತೆಯನ್ನು ನೀವು ಕಾಣಬಹುದಾಗಿದ್ದು, ಎಲ್ ಇಡಿ ಫಾಗ್ ಲ್ಯಾಂಪ್ ಗಳ ಸೇವೆಯೂ ಇರಲಿದೆ.

ಬದಿಯಲ್ಲಿ ನಿಖರವಾದ ರೇಖೆಯಿರಲಿದ್ದು, ಹಿಂದುಗಡೆ ಸಿ ಆಕಾರದ ಟೈಲ್ ಲ್ಯಾಂಪ್ ಮತ್ತು ಬೂಟ್ ಲಿಡ್ ಜೋಡಿಸಲಾಗಿದೆ.

ಕಾರಿನೊಳಗೆ ಬಹಳ ನಾಜೂಕಾದ ಕ್ಯಾಬಿನ್ ವ್ಯವಸ್ಥೆಯು ಒಳಗೊಂಡಿರಲಿದೆ. ಅಲ್ಲದೆ ಗರಿಷ್ಠ ಗುಣಮಟ್ಟತೆಗೆ ಆದ್ಯತೆ ಕೊಡಲಾಗಿದೆ.

12.3 ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆಗೆ ನೇವಿಗೇಷನ್, ಆಪಲ್ ಕಾರ್ ಪ್ಲೇ, 3 ಸ್ಪೋಕ್ ಬಹು ಕ್ರಿಯಾತ್ಮಕ ಸ್ಟೀರಿಂಗ್ ವೀಲ್, ಹೆಡ್ಸ್ ಅಪ್ ಡಿಸ್ ಪ್ಲೇ, ನಪ್ಪಾ ಲೆಥರ್ ಹೋದಿಕೆಯ ಸೀಟುಗಳು ಇತ್ಯಾದಿ ವ್ಯವಸ್ಥೆಗಳಿರಲಿದೆ.

ಹಾಗೆಯೇ ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಸೀಟುಗಲು, 1400 ವ್ಯಾಟ್ ಬೋವರ್ಸ್ ಆಂಡ್ ವಿಲ್ಕಿನ್ಸ್ ಸೌಂಡ್ ಸಿಸ್ಟಂ, ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆಗಳಿರಲಿದೆ.

ಮೂರು ಚಾಲನಾ ವಿಧಗಳಲ್ಲಿ ವೋಲ್ವೋ ಎಸ್90 ಲಭ್ಯವಾಗಲಿದೆ. ಅವುಗಳೆಂದರೆ ಇಕೊ, ಕಂಫರ್ಟ್ ಮತ್ತು ಸ್ಪೋರ್ಟ್.

ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಲೇನ್ ಕೀಪಿಂಗ್ ಏಡ್, ರನ್ ಆಫ್ ಪ್ರೊಟೆಕ್ಷನ್, ವಿಪ್ಲಾಶ್ ಪ್ರೊಟೆಕ್ಷನ್, ಸೈಡ್ ಇಂಪಾಕ್ಟ್ ಪ್ರೊಟೆಕ್ಷನ್ ಇತ್ಯಾದಿ ವೈಶಿಷ್ಟ್ಯಗಳಿರಲಿದೆ.

ಅಂದ ಹಾಗೆ ಇದರಲ್ಲಿರುವ 2.0 ಲೀಟರ್ ಫೋರ್ ಸಿಲಿಂಡರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 400 ಎನ್ ಎಂ ತಿರುಗುಬಲದಲ್ಲಿ 190 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಯುರೋ 6 ಮಾಲಿನ್ಯ ಮಟ್ಟವನ್ನು ಕಾಪಾಡಿಕೊಂಡಿರುವ ನೂತನ ಕಾರು ಎಂಟು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಕಂಪ್ಲೀಟ್ ಬಿಲ್ಟ್ ಯುನಿಟ್ ಮುಖಾಂತರ ವೋಲ್ವೋ ಎಸ್90 ದೇಶವನ್ನು ತಲುಪಲಿದ್ದು, ಡಿಸೆಂಬರ್ ನಿಂದ ವಿತರಣೆ ಪ್ರಕ್ರಿಯೆಯು ಆರಂಭವಾಗಲಿದೆ.

ಸದ್ಯ ವೋಲ್ವೋ ಎಸ್90 ಡಿ4 ವೆರಿಯಂಟ್ ಭಾರತವನ್ನು ತಲುಪಲಿದ್ದು, ಮುಂದಿನ ವರ್ಷದಲ್ಲಿ ಹೆಚ್ಚು ಶಕ್ತಿಶಾಲಿ ಡಿ5 ವೆರಿಯಂಟ್ ಆಗಮನವಾಗಲಿದೆ. ಇದು 480 ಎನ್ ಎಂ ತಿರುಗುಬಲದಲ್ಲಿ 235 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.


Click it and Unblock the Notifications








