ಹಳ್ಳಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್- ಪ್ರಯಾಣಿಕರನ್ನು ರಕ್ಷಿಸಿದ ಗ್ರಾಮಸ್ಥರು
ರಾಜ್ಯಾದ್ಯಂತ ಕಳೆದ 2 ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್‌ವೊಂದು ಹಳ್ಳ ದಾಟುವಾಗ ಉರುಳಿ ಬಿದ್ದಿರುವ ಘಟನೆ ನಡೆದಿದೆ.
ಗದಗ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಈ ನಡುವೆ ನೀರಿನ ರಭಸಕ್ಕೆ ಕೆಎಸ್‍ಆರ್‍ಟಿಸಿ ಬಸ್ ಹಳ್ಳಕ್ಕೆ ಉರುಳಿ ಬಿದ್ದ ಘಟನೆ ಶಿರಹಟ್ಟಿ ತಾಲೂಕಿನ ದೊಡ್ಡೂರ ಗ್ರಾಮದ ಬಳಿ ನಡೆದಿದೆ.

ಚಾಲಕನಿಂದ ಆದ ಪ್ರಮಾದ
ಇನ್ನು ತುಂಬಿ ಹರಿಯುತ್ತಿದ್ದ ದೊಡ್ಡೂರ ಹಳ್ಳದಲ್ಲಿ ಕೆಎಸ್‌ಆರ್‌ಟಿಸಿ ಚಾಲಕ ಪ್ರಯಾಣಿಕರ ವಿರೋಧದ ನಡುವೆಯೂ ಬಸ್ ಚಲಾಯಿಸಿದ್ದಾನೆ. ಆದ್ರೆ ನೀರಿನ ರಭಸಕ್ಕೆ ಬಸ್ ಕೊಚ್ಚಿ ಹೋಗಿದೆ.

ಚಾಲಕನ್ನು ರಕ್ಷಣೆ ಮಾಡಿದ ಸ್ಥಳೀಯರು
ಸ್ಥಳೀಯರ ವಿರೋಧದ ನಡುವೆಯೂ ಚಾಲಕ ಹಳ್ಳದಲ್ಲಿ ಬಸ್ ಚಲಾಯಿಸಿದ ಪರಿಣಾಮ ನೀರಿನ ರಭಸಕ್ಕೆ ಬಸ್ ಹಳ್ಳಕ್ಕೆ ಉರುಳಿದ್ದು, ರಕ್ಷಣೆಗಾಗಿ ಪ್ರಯಾಣಿಕರು ಸ್ಥಳೀಯರನ್ನು ಕೂಗಿಕೊಂಡಿದ್ದಾರೆ.

ಪ್ರಯಾಣಿಕರ ಕೂಗಾಟ, ಚಿರಾಟ ಹಿನ್ನೆಲೆ ಸ್ಥಳೀಯರು ರಕ್ಷಣೆಗೆ ಧಾವಿಸಿ ಹಗ್ಗದ ಸಹಾಯದಿಂದ ಚಾಲಕ ಸೇರಿದಂತೆ ಐದು ಜನರನ್ನು ರಕ್ಷಣೆ ಮಾಡಿದ್ದಾರೆ.

ಶಿರಹಟ್ಟಿ ತಾಲೂಕಿನ ಲಕ್ಷ್ಮೇಶ್ವರ ದಿಂದ ಯಲ್ಲಾಪುರ ಕ್ಕೆ ಹೊರಟಿದ್ದ ಕೆಎ26 ಎಫ್81 ನಂಬರಿನ ಬಸ್ ಇದಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬಸ್ ಚಾಲಕ ಎಂ.ಬಿ ತೂಬರಮಟ್ಟಿ, ನಿರ್ವಾಹಕ ಎ ಎಸ್ ಏಳಬಣವಿ, ಪ್ರಯಾಣಿಕರಾದ ರಾಮಪ್ಪ, ಕಿರಣ್, ಹಾಲಪ್ಪ ಎಂಬುವರನ್ನು ರಕ್ಷಣೆ ಮಾಡಲಾಗಿದೆ.

ಇನ್ನು ಗದಗ ಜಿಲ್ಲಾದ್ಯಂತ ವಿವಿಧ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಬಹುತೇಕ ಹಳ್ಳಕೊಳ್ಳಗಳು ತುಂಬಿಹರಿಯುತ್ತಿವೆ.

ಭಾರೀ ಪ್ರಮಾಣದ ಮಳೆ ಹಿನ್ನೆಲೆ ಅಲ್ಲಲ್ಲಿ ಬಸ್ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಹಳ್ಳಗಳಲ್ಲಿ ವಾಹನಗಳನ್ನು ದಾಟಿಸುವ ಮುನ್ನ ಎಚ್ಚರವಾಗಿರಬೇಕು.

ಕೇವಲ ಹಳ್ಳಗಳಲ್ಲಿ ಅಷ್ಟೇ ಅಲ್ಲ ಮಳೆ ರಭಸಕ್ಕೆ ಬೃಹತ್ ಮರಗಳು ನೆಲಕ್ಕೆ ಉರುಳಿ ಬಿದ್ದಿದ್ದು, ರಸ್ತೆ ಸಂಚಾರಕ್ಕೂ ತೊಂದರೆ ಉಂಟಾಗಿದೆ.

ಸದ್ಯ ರಸ್ತೆಯಲ್ಲಿ ಬಿದ್ದಿರುವ ಬೃಹತ್ ಮರಗಳನ್ನು ತೆರವುಗೊಳಿಸಲಾಗುತ್ತಿದ್ದು, ಕೆರೆ ಮತ್ತು ಹಳ್ಳಗಳನ್ನು ದಾಟುವಾಗ ಎಚ್ಚರ ವಹಿಸುವುದು ಒಳಿತು.


Click it and Unblock the Notifications








