ಹೆಚ್ಚು ಪರ್ಫಾಮೆನ್ಸ್ ನೀಡಲಿದೆ ಮಾಡಿಫೈಗೊಂಡ ಈ ಅಂಬಾಸಿಡರ್ ಕಾರು
ಹಿಂದೂಸ್ತಾನ್ ಮೋಟಾರ್ಸ್ ಕಂಪನಿಯ ಅಂಬಾಸಿಡರ್ ಕಾರ್ ಅನ್ನು ಭಾರತದ ಆಟೋ ಮೊಬೈಲ್ ಉದ್ಯಮದ ದಂತಕಥೆ ಎಂದು ಪರಿಗಣಿಸಲಾಗುತ್ತದೆ. ಸ್ವಾತಂತ್ರ್ಯದ ನಂತರ ಭಾರತದಲ್ಲಿ ಬಲು ಜನಪ್ರಿಯವಾಗಿದ್ದ ಈ ಕಾರ್ ಅನ್ನು ಬಿಎಸ್ 4 ಮಾಲಿನ್ಯ ನಿಯಮ ಮಾನದಂಡಗಳ ಕಾರಣಕ್ಕೆ 2014ರಲ್ಲಿ ಸ್ಥಗಿತಗೊಳಿಸಲಾಯಿತು.

ಈ ಕಾರನ್ನು ಈಗಲೂ ಸಹ ದೇಶದ ಕೆಲವು ಭಾಗಗಳಲ್ಲಿ ಕಾಣಬಹುದು. ಅಂಬಾಸಿಡರ್ ಕಾರ್ ಅನ್ನು ಹಲವು ಸ್ಥಳಗಳಲ್ಲಿ ಟ್ಯಾಕ್ಸಿ ಅಥವಾ ಕ್ಯಾಬ್ ಆಗಿ ಬಳಸಲಾಗುತ್ತದೆ. ಈ ಹಿಂದೆ ಹಲವು ಅಂಬಾಸಿಡರ್ ಕಾರುಗಳನ್ನು ರಿಸ್ಟೋರ್ ಮಾಡಲಾಗಿತ್ತು.

ಈಗ ಮಾಡಿಫೈ ಮಾಡಲಾದ ಅಂಬಾಸಿಡರ್ ಕಾರಿಗೆ ಸಂಬಂಧಿಸಿದ ವೀಡಿಯೊವೊಂದು ಹೊರ ಬಂದಿದೆ. ಈ ವೀಡಿಯೊವನ್ನು ಹಾರ್ಸ್‌ಪವರ್ ಕಾರ್ಟೆಲ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಈ ಕಾರ್ ಅನ್ನು ಕೆ.ಎಸ್.ಮೊಟೊಸ್ಪೋರ್ಟ್ ಮಾಡಿಫೈ ಮಾಡಿದೆ. ಹೆಚ್ಚಿನ ಪರ್ಫಾಮೆನ್ಸ್'ಗಾಗಿ ಈ ಅಂಬಾಸಿಡರ್ ಕಾರ್ ಅನ್ನು ಮಾಡಿಫೈ ಮಾಡಲಾಗಿದೆ. ಈ ಕಾರಿನ ಮಾಡಿಫಿಕೇಶನ್ ಬಗ್ಗೆ ಕೆ.ಎಸ್.ಮೊಟೊರ್ಸ್ಪೋರ್ಟ್ ಮಾಲೀಕರಾದ ಕರಣ್ ಷಾ ಮಾಹಿತಿ ನೀಡಿದ್ದಾರೆ.

ಈ ಕಾರಿನ ಮೂಲ ಕಲ್ಪನೆ ತನ್ನದಲ್ಲ ಎಂದು ಅವರು ಹೇಳುವ ಮೂಲಕ ವೀಡಿಯೊ ಆರಂಭವಾಗುತ್ತದೆ. ಇಂಗ್ಲೆಂಡಿನಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಅವರನ್ನು ಸಂಪರ್ಕಿಸಿ ಗರಿಷ್ಠ 500 ಬಿಹೆಚ್‌ಪಿ ಪವರ್ ಉತ್ಪಾದಿಸುವ ಕೆಂಪು ಅಂಬಾಸಿಡರ್ ಕಾರು ಬೇಕೆಂದು ಕೇಳಿದ್ದರು.

ಆ ಕಾರ್ ಅನ್ನು ಅವರು ಇಂಗ್ಲೆಂಡಿನಲ್ಲಿ ಬಳಸಲು ಬಯಸಿದ್ದರು. ಈ ಅಂಬಾಸಿಡರ್ ಕಾರಿನ ಬೇಸ್ ಹಾಗೂ ಎಂಜಿನ್ ಅನ್ನು ಹಲವು ಕಾರುಗಳಲ್ಲಿ ಬಳಕೆಯಾಗಿರುವ ನಿಸ್ಸಾನ್ ಎಸ್ 13 ಹಾಗೂ ಎಸ್ಆರ್ 20ನಿಂದ ಪಡೆಯಲಾಗಿದೆ.

ಈ ಕಾರಿನ ಮುಂಭಾಗದಲ್ಲಿರುವ ಸಸ್ಪೆಂಷನ್ ಮೌಂಟ್, ಗೇರ್‌ಬಾಕ್ಸ್ ಟನಲ್, ಫೆಂಡರ್ ಹಾಗೂ ಲಿಪ್ ಬಂಪರ್‌ಗಳನ್ನು ಬಾಡಿ ಶಾಪ್'ನಲ್ಲಿ ತಯಾರಿಸಲಾಗಿದೆ. ಈ ಕಾರಿನ ಯಾಂತ್ರೀಕರಣವು ಕೇವಲ ಎರಡು ಮೂರು ತಿಂಗಳಲ್ಲಿ ಪೂರ್ಣಗೊಂಡಿದೆ.

ಇನ್ನು ಬಾಡಿವರ್ಕ್ ಆರರಿಂದ ಎಂಟು ತಿಂಗಳಲ್ಲಿ ಪೂರ್ಣಗೊಂಡಿದೆ. ಬಂಪರ್, ಬಾನೆಟ್, ರಬ್ಬರ್ ಬೀಡಿಂಗ್, ಗ್ಲಾಸ್ ಇತ್ಯಾದಿಗಳನ್ನು ಹುಡುಕಿ ಪಡೆಯ ಬೇಕಾದ ಕಾರಣ ಬಾಡಿವರ್ಕ್ ಪೂರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಂಡಿದೆ.
ಮಾಡಿಫೈಗೊಂಡ ಅಂಬಾಸಿಡರ್ ಕಾರಿನ ಮುಂಭಾಗದಲ್ಲಿ 8 ಪಿಸ್ಟನ್ ಬ್ರೇಕ್ ಕ್ಯಾಲಿಪರ್ ಹಾಗೂ ಹಿಂಭಾಗದಲ್ಲಿ 4 ಪಿಸ್ಟನ್ ಬ್ರೇಕ್ ಕ್ಯಾಲಿಪರ್‌ಗಳನ್ನು ಅಳವಡಿಸಲಾಗಿದೆ. ಈ ಕಾರಿನಲ್ಲಿ ಅಳವಡಿಸಿರುವ ನಿಸ್ಸಾನ್ ಎಸ್ಆರ್ 20 ಎಂಜಿನ್ 200 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಮಾಡಿಫೈಗೊಂಡ ಈ ಅಂಬಾಸಿಡರ್ ಕಾರಿನಲ್ಲಿ ನಿಸ್ಸಾನ್ ಎಸ್ 13 ಬೇಸ್ ಬಳಸಲಾಗಿದೆ. ಈ ಅಂಬಾಸಿಡರ್ ಕಾರಿನ ಮಾಡಿಫಿಕೇಶನ್'ಗಾಗಿ ಸುಮಾರು ರೂ.30 ಲಕ್ಷ ವೆಚ್ಚವಾಗಿದೆ.


Click it and Unblock the Notifications








