ಜಗತ್ತಿನ ಐದನೇ ಅತಿದೊಡ್ಡ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿತವಾಗಿರುವ ಹೈಪರ್ ಲೂಪ್ ಕನಸಿಗೆ ಫ್ರಾನ್ಸ್‌ನ ಲೌಟಸ್‌ನಲ್ಲಿ ಅಧಿಕೃತ ಚಾಲನೆ ಸಿಕ್ಕಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಹೊಸ ಸಾರಿಗೆಯೊಂದು ಸೇವೆಗೆ ಲಭ್ಯವಾಗಲಿದೆ.
ಹೈಪರ್ ಲೂಪ್ ಸಾರಿಗೆ ಅಭಿವೃದ್ಧಿಯ ಹೊಣೆ ಹೊತ್ತಿರುವ ಹೈಪರ್ ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿಸ್ ಸಂಸ್ಥೆಯು ಮೊದಲ ಹಂತವಾಗಿ 320ಮೀಟರ್ ಉದ್ದದ ಹೈಪರ್ ಲೂಪ್ ಕೊಳವೆಯನ್ನು ನಿರ್ಮಾಣ ಮಾಡಿ ಪರೀಕ್ಷಾರ್ಥ ಕಾರ್ಯಕ್ಕೆ ಚಾಲನೆ ನೀಡಿದ್ದು, 2019ರ ವೇಳೆಗೆ ಇದನ್ನು 1 ಕಿ.ಮೀ ಗೆ ವಿಸ್ತರಣೆ ಮಾಡಲಿದೆಯಂತೆ.
ಈ ಮೂಲಕ ಹೈಪರ್ ಲೂಪ್ ಸಾರಿಗೆಯಲ್ಲಿ ಕೈಗೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲಿದ್ದು, ತದನಂತರವಷ್ಟೇ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಗುರುತಿಸಲಾಗಿರುವ ಹೈಪರ್ ಲೂಪ್ ಮಾರ್ಗಗಳ ನಿರ್ಮಾಣಕ್ಕೆ ಚಾಲನೆ ಸಿಗಲಿದೆ.
ಹೈಪರ್ ಲೂಪ್ ಸಾರಿಗೆ ವ್ಯವಸ್ಥೆ ಕ್ಯಾಪ್ಸೂಲ್ ರೀತಿಯ ವಾಹನವಾಗಿದ್ದು ವಾಯುಚಾಲಿತ ಟನಲ್ ಒಳಗೆ ಸಂಚರಿಸುವ ಯಾಂತ್ರಿಕ ವ್ಯವಸ್ಥೆ ಹೊಂದಿದೆ. ಇದು ಪ್ರತಿ ಗಂಟೆಗೆ 1200ಕಿ.ಮೀ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಹೈಪರ್ ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿಸ್ ಸಂಸ್ಥೆಯು ಇದಕ್ಕಾಗಿ ಮತ್ತಷ್ಟು ಹೊಸ ಸಂಶೋಧನೆಗಳನ್ನು ನಡೆಸುತ್ತಿದೆ.
ಈ ಬಗ್ಗೆ ಮಾತನಾಡಿರುವ ಹೈಪರ್ ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿಸ್ ಸಿಇಒ ಡರ್ಕ್ ಅಲ್ಬಾರ್ನ್, ಕಳೆದ 5 ವರ್ಷ ಹಿಂದೆ ಹೈಪರ್ ಲೂಪ್ ಸಾರಿಗೆ ನಿರ್ಮಾಣಕ್ಕಾಗಿ ಕಂಡ ಕನಸನ್ನು ಇದೀಗ ವಾಸ್ತವಕ್ಕೆ ತರಲಾಗುತ್ತಿದ್ದು, ಅತಿವೇಗದ ಸಾರಿಗೆ ನಿರ್ಮಾಣದ ಜೊತೆ ಜೊತೆಗೆ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದಿದ್ದಾರೆ.
ಇನ್ನು ಹೈಪರ್ ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿಸ್ ಅಷ್ಟೇ ಅಲ್ಲದೇ, ವರ್ಜಿನ್ ಗ್ರೂಪ್, ಹೈಪರ್ ಲೂಪ್ ಒನ್ ಮತ್ತು ಟೆಸ್ಲಾ ಸಂಸ್ಥೆಗಳು ಕೂಡಾ ಇದೇ ಹೈಪರ್ ಲೂಪ್ ಸಾರಿಗೆ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಯತ್ನದಲ್ಲಿದ್ದು, ಟೆಸ್ಲಾ ಸಂಸ್ಥೆಯು ಈಗಾಗಲೇ ಕ್ಯಾಲಿಫೋರ್ನಿಯಾದಲ್ಲಿ 1.6 ಕಿಮೀ ಉದ್ದದ 3.3 ಮೀಟರ್ ವ್ಯಾಸದ ಹೈಪರ್ ಲೂಪ್ ಪರೀಕ್ಷಾರ್ಥ ಸೌಲಭ್ಯವನ್ನು ನಿರ್ಮಾಣ ಮಾಡಿದೆ.
ವಿಶೇಷ ಅಂದ್ರೆ ಹೈಪರ್ ಲೂಪ್ ಪರೀಕ್ಷಾರ್ಥ ಕಾರ್ಯಗಳಿಗೆ ಹೈಪರ್ ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿಸ್ ಸಂಸ್ಥೆಯು ಅಧಿಕೃತ ಚಾಲನೆ ನೀಡಿದ್ದು, ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಹೈಪರ್ ಲೂಪ್ ಸಾರಿಗೆ ಮಾರ್ಗಗಳನ್ನು ನಿರ್ಮಾಣ ಮಾಡುವ ಗುರಿಹೊಂದಿದೆ.
ಭಾರತದಲ್ಲೂ ಹೈಪರ್ ಲೂಪ್ ಸಾರಿಗೆ ನಿರ್ಮಾಣಕ್ಕಾಗಿ ಈಗಾಗಲೇ ವರ್ಜಿನ್ ಗ್ರೂಪ್ ಮತ್ತು ಟೆಸ್ಲಾ ಸಂಸ್ಥೆಗಳು ಮುಂಬೈ ಟು ಪುಣೆ, ಬೆಂಗಳೂರು ಟು ಚೆನ್ನೈ ಮಾರ್ಗಗಳು ಗುರುತಿಸಿದ್ದು, ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಹೈಪರ್ ಲೂಪ್ ಟ್ರಾನ್ಸ್‌ಪೋರ್ಟ್ ಟೆಕ್ನಾಲಜಿಸ್ ಸಂಸ್ಥೆಯು ಆಂಧ್ರಪ್ರದೇಶ ಸರ್ಕಾರದ ಜೊತೆ ಹೊಸ ಒಡಂಬಡಿಕೆ ಮಾಡಿಕೊಂಡಿದೆ.
ಅಮರಾವತಿ ಟು ವಿಜಯವಾಡ ನಡುವಿನ 42ಕಿಮಿ ಉದ್ದದ ಹೈಪರ್ ಲೂಪ್ ಮಾರ್ಗ ನಿರ್ಮಾಣಕ್ಕಾಗಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಂದೂವರೆ ಗಂಟೆಯ ಪ್ರಯಾಣದ ಅವಧಿಯನ್ನು ಕೇವಲ 6 ನಿಮಿಷಗಳಿಗೆ ತಗ್ಗಿಸಲಿದೆ.
ಇನ್ನು ಹೈಪರ್ ಲೂಪ್ ಮಾತೃ ಸಂಸ್ಥೆಯಾಗಿರುವ ವರ್ಜಿನ್ ಗ್ರೂಪ್ ಸಂಸ್ಥೆಯು ಮುಂಬೈ ಟು ಪುಣೆ ಮತ್ತು ಚೆನ್ನೈ ಟು ಬೆಂಗಳೂರು ನಡುವಿನ ಹೈಪರ್ ಲೂಪ್ ಮಾರ್ಗ ನಿರ್ಮಾಣಕ್ಕಾಗಿ ಆಸಕ್ತಿ ತೊರಿದ್ದು, ಇದಕ್ಕಾಗಿ ಕಳೆದ ವರ್ಷ ಮಹಾರಾಷ್ಟ್ರ ಸರ್ಕಾರದ ಜೊತೆಗೆ ಒಪ್ಪಂದ ಕೂಡಾ ಮಾಡಿಕೊಂಡಿದೆ.
ಹೈಪರ್ ಲೂಪ್ ಹಳಿ ನಿರ್ಮಾಣ ಮಾಡಲು ಪ್ರತಿ ಕಿಲೋ ಮೀಟರ್‌ಗೆ 50 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚ ಅಂದಾಜಿಸಲಾಗಿದ್ದು, ಪ್ರತಿಯೊಂದು ಪೊಡ್‌ನಲ್ಲಿ 28ರಿಂದ 40 ಮಂದಿಯನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ದಿನ ಒಂದಕ್ಕೆ 67 ಸಾವಿರ ಪ್ರಯಾಣಿಕರನ್ನು ಹೊತ್ತೊಯ್ಯುವ ನೀರಿಕ್ಷೆಯಿದೆ.
ಒಂದು ವೇಳೆ ವೇಳೆ ಹೈಪರ್ ಲೂಪ್ ಯೋಜನೆಗೆ ಭಾರತದಲ್ಲೂ ಚಾಲನೆ ಸಿಕ್ಕಲ್ಲಿ ಮುಂಬೈ ಟು ಪುಣೆ ನಡುವಿನ ಪ್ರಮಾಣದ ಅವಧಿ 15 ನಿಮಿಷಕ್ಕೆ ಮತ್ತು ಬೆಂಗಳೂರು ಟು ಚೆನ್ನೈ ನಡುವಿನ ಪ್ರಯಾಣದ ಅವಧಿ 30 ನಿಮಿಷಗಳಿಗೆ ಇಳಿಕೆಯಾಗುವ ಭರವಸೆಯಿದೆ.
ಹೀಗಾಗಿ ವಿಮಾನ, ರೈಲು, ಹಡಗು ಮತ್ತು ಬಸ್ ಸಾರಿಗೆ ನಂತರ ಹೈಪರ್ ಲೂಪ್ ಅನ್ನು ಭವಿಷ್ಯದ 5ನೇ ಸಾರಿಗೆ ವ್ಯವಸ್ಥೆ ಎಂದೇ ಬಿಂಬಿಸಲಾಗಿದ್ದು, ಬೃಹತ್ ನಗರಗಳಲ್ಲಿ ಹೈಪರ್ ಲೂಪ್ ತಂತ್ರಜ್ಞಾನವು ಜಾರಿಯಾದಲ್ಲಿ ಖಂಡಿತವಾಗಿಯೂ ಇದೊಂದು ಯಶಸ್ವಿ ಸಾರಿಗೆ ವ್ಯವಸ್ಥೆಯಾಗಲಿದೆ.
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark