ಭಲೇ ಭೇಷ್; ಡಕಾರ್ ಟಾಪ್ 40 ಭೇದಿಸಿದ ಸಂತೋಷ್

Written By:

ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಅಮೋಘ ಪ್ರದರ್ಶನ ಮುಂದುವರಿಸಿರುವ ಭಾರತೀಯ ಹೆಮ್ಮೆಯ ಹಾಗೂ ಕನ್ನಡಿಗ ಸಿಎಸ್ ಸಂತೋಷ್, ಉತ್ತರ ಅಮೆರಿಕದಲ್ಲಿ ನಡೆಯುತ್ತಿರುವ ಅತಿ ಅಪಾಯಕಾರಿ 2015 ಡಕಾರ್ ರಾಲಿಯ 10ನೇ ಸುತ್ತಿನ ಅಂತ್ಯದ ವೇಳೆ ಅಗ್ರ 40 ಪಟ್ಟಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಟಿಎಂ 450 ಬೈಕ್‌ನಲ್ಲಿ ತನ್ನ ಸವಾರಿ ಮುಂದುವರಿಸಿರುವ ಬೆಂಗ್ಳೂರಿಗ ಸಂತೋಷ್, 10ನೇ ಸುತ್ತಿನ ಅಂತ್ಯದ ವೇಳೆ 38ನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ. ಕಳೆದ ಒಂದು ವಾರಗಿಂತಲೂ ಹೆಚ್ಚು ನಿರಂತರ ರೇಸಿಂಗ್‌ನಲ್ಲಿ ತೊಡಗಿರುವ ಸಂತೋಷ್, ಜೀವಮಾನ ಶ್ರೇಷ್ಠ ಸಾಧನೆ ಮಾಡುವ ತವಕದಲ್ಲಿದ್ದಾರೆ.

cs santosh

10 ದಿನಗಳ ಹಿಂದೆ 160ಕ್ಕಿಂತಲೂ ಹೆಚ್ಚು ಸ್ಪರ್ಧಿಗಳಿದ್ದ ಪಟ್ಟಿಯಲ್ಲೀಗ 80ರಷ್ಟು ಸ್ಪರ್ಧಿಗಳು ಮಾತ್ರ ಕಣದಲ್ಲಿದ್ದಾರೆ. ಹಾಗಿರುವಾಗ ಡಕಾರ್‌ನಲ್ಲಿ ಭಾಗವಹಿಸುತ್ತಿರುವ ಮೊದಲ ಭಾರತೀಯನೆಂಬ ಗೌರವಕ್ಕೆ ಪಾತ್ರವಾಗಿರುವ ಸಂತೋಷ್ ನಿಜಕ್ಕೂ ನಂಬಲಾಗದ ಪ್ರದರ್ಶನ ನೀಡುತ್ತಿದ್ದಾರೆ.

ವಿಶ್ವ ಮಟ್ಟದ ರೇಸರ್ ವಿರುದ್ಧ ಸ್ಪರ್ಧಿಸುತ್ತಿರುವ ಸಂತೋಷ್ ಅಗ್ರ 20ರೊಳಗೆ ಕಾಣಿಸಿಕೊಳ್ಳುವುದೇ ಗುರಿಯಾಗಿದೆ. ಅಲ್ಲದೆ ಇನ್ನು ಮೂರು ಸುತ್ತುಗಳ ರೇಸ್ ಮಾತ್ರ ಬಾಕಿ ಉಳಿದಿರುವಂತೆಯೇ ಸಂತೋಷ್ ನಿರ್ವಹಣೆ ಬಹಳ ಗಮನಾರ್ಹವೆನಿಸಿದೆ.

cs santosh

ಡಕಾರ್2015 ಸ್ಪರ್ಧೆಯು 2015 ಜನವರಿ 4ರಿಂದ 17ರ ವರೆಗೆ ದಕ್ಷಿಣ ಅಮೆರಿಕ ರಾಷ್ಟ್ರಗಳಾದ ಅರ್ಜೆಂಟೀನಾ, ಚಿಲಿ ಹಾಗೂ ಬೊಲಿವಿಯಾದಲ್ಲಿ ಆಯೋಜನೆಯಾಗುತ್ತಿದ್ದು, ಒಟ್ಟು 9000 ಕೀ.ಮೀ. ದೂರವನ್ನು ಕ್ರಮಿಸಲಿದೆ. ಒಟ್ಟು 13 ಹಂತಗಳಾಗಿ (ಸ್ಟೇಜ್) ನಡೆಯುತ್ತಿರುವ ಡಕಾರ್ ರಾಲಿಯ ಆರಂಭ ಹಾಗೂ ಫಿನಿಶಿಂಗ್ ಪಾಯಿಂಟ್ ಬ್ಲೂನಸ್ ಐರಿಸ್‌ನಲ್ಲಿದೆ. ಇಲ್ಲಿ ಕಾರು ಬೈಕ್ ಸೇರಿದಂತೆ ಟ್ರಕ್ ಹಾಗೂ ಕ್ವಾಡ್ ರೇಸ್ ಸಹ ನಡೆಯುತ್ತಿದೆ.

English summary
Dakar Rally 2015: Santosh breaks into top 40 on Day 10
Story first published: Thursday, January 15, 2015, 15:33 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark