ಡಿ 14: ದೇಶದ ರಸ್ತೆಗೆ ಹೊಸ ಹೋಂಡಾ ಸಿಟಿ ಸೆಡಾನ್

ನೂತನ ಸಿಟಿ ಕಾರು ಈಗಾಗಲೇ ರಸ್ತೆಗಿಳಿಯಬೇಕಿತ್ತು. ಥೈಲಾಂಡ್ ನಲ್ಲಿನ ನೆರೆ ಹಾವಳಿ ನೂತನ ಹೋಂಡಾ ಸಿಟಿ ಉತ್ಪಾದನೆಗೆ ಹಿನ್ನಡೆಯುಂಟುಮಾಡಿತ್ತು. ಕೆಲವು ವರದಿಗಳ ಪ್ರಕಾರ ಮುಂದಿನ ವರ್ಷದ ಆರಂಭದಲ್ಲಿ ನೂತನ ಸಿಟಿ ಕಾರು ಬರುವುದಾಗಿ ಹೇಳಲಾಗಿತ್ತು. ಆದರೆ ಕಂಪನಿಯು ಡಿಸೆಂಬರ್ ಹದಿನಾಲ್ಕರಂದು ಹೊಸ ಸಿಟಿ ಕಾರನ್ನು ಅನಾವರಣ ಮಾಡುವುದಾಗಿ ಹೇಳಿದೆ.
ಹಳೆಯ ಮೆಕಾನಿಕ್ ಅಂಶಗಳಲ್ಲಿ ಯಾವುದೇ ಬದಲಾವಣೆ ಮಾಡದೇ ನೂತನ ಸಿಟಿ ಕಾರನ್ನು ಕಂಪನಿ ಹೊರತರಲಿದೆ. ಅಂದರೆ ಬರೀ ಪ್ರಸಾಧನ ಅಂಶಗಳು ಅಥವಾ ಸಿಟಿ ಕಾರಿನ ಲುಕ್ ಬದಲಾಗಲಿದೆ. ಆದರೆ ಎಂಜಿನ್, ಕಾರ್ಯಕ್ಷಮತೆ ಹಳೆಯ ಸಿಟಿ ಕಾರಿನಂತೆಯೇ ಇರಲಿದೆ.
ಈಗಾಗಲೇ ಥೈಲಾಂಡಿನಲ್ಲಿ ಹೊಸ ಹೋಂಡಾ ಸಿಟಿ ರಸ್ತೆಗಿಳಿದಿದೆ. ಹೀಗಾಗಿ ಸದ್ಯಕ್ಕೆ ಅಲ್ಲಿನ ಸಿಟಿ ಕಾರಿನ ಚಿತ್ರವನ್ನೇ ಈ ಲೇಖನದಲ್ಲಿ ಬಳಸಲಾಗಿದೆ. ಈಗ ಡೀಸೆಲ್ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ನೂತನ ಸಿಟಿಗೆ ಹೆಚ್ಚು ಹೂಡಿಕೆ ಮಾಡದಿರಲು ಕಂಪನಿ ನಿರ್ಧರಿಸಿದೆ.
ಕಂಪನಿಯು ಈಗ ಸಿಟಿ ಕಾರಿಗೆ ಡೀಸೆಲ್ ಎಂಜಿನ್ ಅಭಿವೃದ್ಧಿಪಡಿಸುತ್ತಿದೆ. ಸಿಟಿ ಡೀಸೆಲ್ ಕಾರು ಮುಂದಿನ ವರ್ಷ ರಸ್ತೆಗಿಳಿಯುವ ನಿರೀಕ್ಷೆಗಳಿವೆ. ನೂತನ 2012 ಹೋಂಡಾ ಸಿಟಿ 1.5 ಲೀಟರಿನ ಐಬಿಟೆಕ್ ಪೆಟ್ರೋಲ್ ಎಂಜಿನ್ ಮತ್ತು 5 ಸ್ಪೀಡ್ ಮ್ಯಾನುಯಲ್ ಗೇರ್ ಬಾಕ್ಸ್ ಹೊಂದಿರಲಿದೆ. ಹೊಸ ಸಿಟಿ ಕಾರಿನ ದರ ಹಳೆಯ ಕಾರಿಗಿಂತ ಕೊಂಚ ಹೆಚ್ಚಿರಲಿದೆ.
ಏತನ್ಮಧ್ಯೆ ಕಂಪನಿಯು ಬ್ರಿಯೊ ಸಣ್ಣಕಾರಿನ ಉತ್ಪಾದನೆಯನ್ನು ಭಾರತದಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದೆ. ಥೈಲಾಂಡಿನಿಂದ ಬ್ರಿಯೊ ಬಿಡಿಭಾಗ ಪೂರೈಕೆಯಲ್ಲಿ ವ್ಯತ್ಯಾಯವಾಗಿರುವುದೇ ಇದಕ್ಕೆ ಕಾರಣವಾಗಿದೆ.


Click it and Unblock the Notifications








