ಸಾಹಿತ್ಯ ಲಹರಿ: ಕುವೆಂಪು, ತೇಜಸ್ವಿ ಮತ್ತು ಸ್ಟುಡಿಬೇಕರ್

By * ಡಾ.ಬಿ.ಆರ್.ಸತ್ಯನಾರಾಯಣ

ದಿನಾಂಕ : 18-11-1956, ಸ್ಥಳ : ಬೆಂಗಳೂರು-ಶಿವಮೊಗ್ಗ ರಸ್ತೆ. ಕವಿ ಆಗ ವೈಸ್ ಛಾನ್ಸಲರ್ ಆಗಿದ್ದರು. ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು, ಅಲ್ಲಿಂದ ಶಿವಮೊಗ್ಗೆಗೆ ಪಯಣ ಬೆಳೆಸಿದ್ದರು.

ಶಿವಮೊಗ್ಗೆಗೆ ಧಾವಿಸಿತ್ತು ಕವಿಯ ಕಾರು
ಕಾಲದೇಶ ಲಗ್ಗೆಗೆ ಕ್ಷಣಕ್ಷಣಕ್ಷಣಕ್ಕೆ ಮೈಲಿ ಮೈಲಿ ಮೈಲಿ
ಹಾರುತ್ತಿತ್ತು ಕವಿಯ ಕಾರು:
ತೇಲುತಿತ್ತು ಚಿಮ್ಮುತಿತ್ತು ಈಜುತಿತ್ತು ಮಿಂಚುತಿತ್ತು
ಸಿಮೆಂಟು, ಟಾರು!
ಉಬ್ಬು ತಗ್ಗು ನೇರ ಡೊಂಕು
ಕರಿಯ ರಸ್ತೆ ಹಾವು ಹರಿಯುತಿತ್ತು
ಸರ್ಪಿಸಿ!

ದೂರದ ಪಯಣ. ವೇಗವಾಗಿ ಚಲಿಸುತ್ತಿರುವ ಕಾರು. ಅದರೊಳಗೆ ಕುಳಿತ ಕವಿಗೆ ಉಂಟಾಗಿದ್ದ ದೀರ್ಘ ಪಯಣದ ಏಕತಾನತೆಯ ಬೇಸರ "ಕರಿಯ ರಸ್ತೆ ಹಾವು ಹರಿಯುತಿತ್ತು ಸರ್ಪಿಸಿ" ಎಂಬ ಸಾಲಿನಲ್ಲಿ ವ್ಯಕ್ತವಾಗಿದೆ. ಆಗ ಆ ಕಾರಿನಲ್ಲಿ ಇನ್ನೂ ಯಾರ‍್ಯಾರು ಇದ್ದರು? ಕಾರು ಯಾವುದು? ಡ್ರೈವರ್ ಯಾರು?

ಕವಿ: ವೈಸ್ ಛಾನ್ಸಲರ್!
ಕಾರ್ : ಸ್ಟುಡಿಬೇಕರ್!
ಸದ್ಯದ ಡ್ರೈವರ್ : ಪೂರ್ಣಚಂದ್ರ ತೇಜಸ್ವಿ!
ಅವನ ಪಕ್ಕ ನಿಜ ಡ್ರೈವರ್!

ಇವರುಗಳ ಜೊತೆಯಲ್ಲಿ ಹಿಂದಿನ ಸೀಟಿನಲ್ಲಿ ಕುಳಿತು ಪಯಣಿಸುತ್ತಿದ್ದ ಕವಿಗೆ, ಕಾರಿನ ವೇಗ 'ಜವದ ಹುಚ್ಚೆ ಹಿಡಿಯಿತೇನೊ ಪೆಟ್ರೋಲಿಗೆ' ಅನ್ನಿಸಿಬಿಟ್ಟಿದೆ. ಅವುಗಳ ನಡುವೆಯೂ ಕಾರ‍್ತಿಕ ಮಾಸಜ ನೆಲ, ಮುಗಿಲು, ನೀಲ ಬಾನು, ಎಪ್ಪತ್ತೈದು ಮೈಲಿಯ ವೇಗದಲ್ಲಿರುವ ಕಾರು ಎಲ್ಲವನ್ನೂ ಕವಿ ಗಮನಿಸುತ್ತಿದ್ದಾರೆ. ಕಾರಿನ ಸ್ಪೀಡಾಮೀಟರ್ ಕಡೆ ಕಣ್ಣು ಹಾಯಿಸುತ್ತಾರೆ. ಕಾರಿನ ಹೆಚ್ಚಿದ ವೇಗವನ್ನು 'ಗೂಳಿಗಣ್ಣ ಸ್ಪೀಡಾಮೀಟರ್ ಕೂಗಿ ಹೇಳುತ್ತಿತ್ತು.'

"ಬೇಡ ಕಣೋ ಇಷ್ಟು ಸ್ಪೀಡು!
ಬಿಡಿ, ಅಣ್ಣಾ, ಸುಮ್ಮನಿರಿ,
ನನಗೆ ಗೊತ್ತಿದೆ!"
ಎಂದಿನಂತೆ ತೇಜಸ್ವಿಯ ಉಡಾಫಿ ಉತ್ತರ!

ಚಾಲಕನಾಗಿ ಕುಳಿತಿದ್ದ ತೇಜಸ್ವಿಗೆ ಆಗಿನ್ನೂ ಹದಿನೆಂಟು ವರ್ಷ ತುಂಬಿದೆ ಅಷ್ಟೆ. ಬಹುಶಃ ಡೈವಿಂಗ್ ಲೈಸೆನ್ಸ್ ಬಂದು ಕೆಲವು ದಿನಗಳಷ್ಟೇ ಕಳೆದಿದ್ದರಬಹುದು. ಆದರೂ ಕಾರು ಚಾಲನೆಯಲ್ಲಿ ತೇಜಸ್ವಿ ಫಳಗಿಬಿಟ್ಟಿದ್ದಾರೆ. ನಿಜವಾದ ಡ್ರೈವರ್ ಇದ್ದರೂ, ಆತನನ್ನು ಪಕ್ಕದಲ್ಲಿ ಕುಳ್ಳಿರಿಸಿ, ಕಾರು ಚಾಲನೆಗಿಳಿದಿರುವ ತೇಜಸ್ವಿಯ ಮೇಲಿನ ನಂಬಿಕೆಯಿಂದ ಕವಿ ಕುಳಿತಿದ್ದಾರೆ. ಮಗನ ಉಡಾಫಿ ಉತ್ತರ ಬಹುಶಃ ಅವರಿಗೆ ದಿಗಿಲಿಕ್ಕಿಸಿರಬಹುದು. ಅದಕ್ಕೆ 'ಸರಿ, ಕಣ್ಣು ಮುಚ್ಚಿ ಕುಳಿತೆ:' ಎನ್ನುತ್ತಾರೆ. ದೇವರ ಮೇಲೆ ಭಾರ ಹಾಕಿದ್ದಿರಬಹುದು! ಹಾಗೆ ಕಣ್ಣು ಮುಚ್ಚಿ ಕುಳಿತ ಕವಿ ಕಂಡಿದ್ದು ಮಾತ್ರ ಜಗದ್ಬವ್ಯ ದೃಶ್ಯವನ್ನು.

ದಕ್ಷಿಣೇಶ್ವರ! ಭವತಾರಿಣಿ!
ಜಗದಂಬೆಗೆ ಚವರಿ ಬೀಸುತಿಹರು ಪರಮಹಂಸರು!
ಕೈಯ ಮುಗಿದು ನಿಂತು ನೋಡಿ ಧನ್ಯನಾಗುತ್ತಿದ್ದೆ.

ಅಷ್ಟರಲ್ಲಿ ಕಾರಿನ ಚಕ್ರದಲ್ಲಿ ಏನೋ ಕಿರ್ರ್ ಎಂಬ ಶಬ್ದ! "ಗಾಲಿ ವಾಲಿ ಸದ್ದು ಮಾಡತೊಡಗಿದೆ!" ಆ ಶಬ್ದದ ನಡುವೆ ಮುಂದಿನ ಸೀಟಾಸೀನರಾಗಿದ್ದ ತೇಜಸ್ವಿ ಮತ್ತು ಡ್ರೈವರ್ ನಡುವೆ ನಡೆಯುವ ಸಂಭಾಷಣೆ ಕವಿಯ ಕಿವಿಯನ್ನಪ್ಪಳಿಸುತ್ತದೆ.

"ಸ್ಟೀರಿಂಗೇಕೊ ಸರಿ ಇಲ್ಲ; ಸ್ವಲ್ಪ ಎಣ್ಣೆ ಬಿಡಬೇಕಿತ್ತೊ?"
"ನಿನ್ನೆ ಅಲ್ಲ ಮೊನ್ನೆ ತಾನೆ ಲೂಬ್ರಿಕೇಷನ್ ಆಗಿದೆ"
ಎಂದ ಡ್ರೈವರ್, ಡ್ರೈವ್ ಮಾಡುತ್ತಿದ್ದ ತೇಜಸ್ವಿಗೆ.
"ಚಕ್ರವೇಕೊ ಎಡದ ಕಡೆಗೆ ವಾಲುತ್ತಿದೆ!"

ಗಾಡಿ ನಿಲ್ಲುತ್ತದೆ. ಎಲ್ಲರೂ ಕೆಳಗಿಳಿಯುತ್ತಾರೆ. ಪರೀಕ್ಷೆ ನಡೆಯುತ್ತದೆ. ಮೆಷಿನರಿಗಳ ಮರಿ ಡಾಕ್ಟರ್ ತೇಜಸ್ವಿ ಸುಮ್ಮನಿರುತ್ತಾರೆಯೇ!?

ಜಾಕ್ ಹೊರಗೆ ಬಂದಿತು
ಗಾಡಿ ಮೇಲಕೆದ್ದಿತು.
ಚಕ್ರ ಬಿಚ್ಚಿದರು.
ಸ್ಪ್ಯಾನರ್-ಸ್ಕ್ರೂ ಡ್ರೈವರ್-ವ್ಹೀಲ್ ಸ್ಪ್ಯಾನರ್- ಟಕ್ ಟಕ್ ಟಕ್....

ಅರ್ಧ ಗಂಟೆ ರಿಪೇರಿ ನಂತರ ಮತ್ತೆ ಎಲ್ಲರೂ ಕಾರು ಏರಿ ಹೊರಡುತ್ತಾರೆ. ಸ್ವಲ್ಪ ದೂರ ಅಷ್ಟೆ. ಮತ್ತೆ ಚಕ್ರದಿಂದ ಕಿರೋ ಕಿರೋ ಶಬ್ದ ಬರುತ್ತದೆ. "ಫಿಷ್ ಪ್ಲೇಟ್...... ಟೈರ್ ರಾಡ್ ಎಂಡ್....." ಇನ್ನೂ ಏನೇನೊ ಶಬ್ದಗಳು ಕವಿಯ ಕಿವಿಗೆ ಬೀಳುತ್ತವೆ. ಆದರೆ, ಏನೆಂದು ಕವಿಗೆ ಅರ್ಥವಾಗುವುದಿಲ್ಲ. ಈ ಬಾರಿ ತೇಜಸ್ವಿ ಡ್ರೈವರ್ ಇಬ್ಬರೇ ಇಳಿಯುತ್ತಾರೆ. ಸ್ವಲ್ಪ ಒತ್ತಿನ ನಂತರ ಕವಿಯೂ ಬೇಸರದಿಂದಲೇ ಇಳಿಯುತ್ತಾರೆ; ಒಳಗೆ ಕೂರುವ ಬೇಸರದಿಂದ ತಪ್ಪಿಸಿಕೊಳ್ಳಲು. ಅವರಿಬ್ಬರ ಸಂಭಾಷಣೆ, ಅದರೊಂದಿಗೆ ರಿಪೇರಿ ಕಾರ್ಯಭಾರ ಮುಂದುವರೆಯುತ್ತದೆ.

"ಚಕ್ರ ವಾಲಿ ಹೀಗೆ ಗಾಡಿ ನಡೆದರೆ
ಬಹಳ ಕೆಟ್ಟದು" ಎಂದ ತೇಜಸ್ವಿ.
"ಹೌದು ಅಣ್ಣ" ಎಂದು ಡ್ರೈವರ್ ಪಲ್ಲವಿ!
ಮತ್ತೆ ಜಾಕು ಕೊಟ್ಟು ಕಾರು ಎದ್ದಿತು.
ಡ್ರೈವರ್ ಕಾರಿನ ಹೊಟ್ಟೆ ಅಡಿ ಅಡಗಿದ.
ದಾರವಿಟ್ಟು ಅಳೆದರು: ಏಕೊ ಏನೊ?
ಅದರ ಬದಲು ಕುಂಕುಮ ಹಚ್ಚಿದ್ದರೂ
ಆಗುತಿತ್ತೇನೊ!

ಈ ಎಲ್ಲಾ ರಿಪೇರಿ ಕರ್ಮವನ್ನು ಹುಡುಗರ ಬೇಜವಬ್ದಾರಿಯನ್ನು ಕಂಡು ಕವಿಗೆ ರೇಗುತ್ತದೆ.

"ಮೊನ್ನೆ ತಾನೆ ಲ್ಯೂಬ್ರಿಕೇಷನ್ ಮಾಡಿಸಿದೆ.
ಇಂದು ಕಾರು ದಾರಿಯಲ್ಲಿ ತೊಂದರೆ ಕೊಡುತ್ತಿದೆ.
ನಿನಗೆ ತಲೆ ನೆಟ್ಟಗಿದ್ದರೆ ಹೀಗಾಗುತಿತ್ತೆ?
ನೀನೊಬ್ಬ ಡ್ರೈವರ್... ಕೆಲಸಕ್ಕೆ ಬಾರದವ...
ಬೆಪ್ಪು ಮುಂಡೇದು!...
ಹೀಗೆ ಸಹಸ್ರನಾಮ!....
ಇನ್ನೆಂದಿಗೂ ಈ ಡ್ರೈವರು ಈ ಕಾರು ನಂಬಿ
ದೂರ ಪಯಣಕ್ಕೆ ಹೊರಡುವುದಿಲ್ಲ.
ಇದೇ ಕೊಟ್ಟಕೊನೆ! ಇದೇ ಕೊಟ್ಟ ಕೊನೆ!"

ರೇಗಿದ ಕವಿಯಿಂದ ಡ್ರೈವರನಿಗೆ ಕಾರಿಗೆ ಸಹಸ್ರಾರ್ಚನೆ! ಜೊತೆಗೆ ಭೀಷ್ಮ ಪ್ರತಿಜ್ಞೆ ಬೇರೆ. ರಿಪೇರಿಯಲ್ಲೇ ಎರಡು ಗಂಟೆ ಕಳೆದ ಬೇಸರ. ಆದರೂ ಒಂದು ಸಲಹೆ ಕವಿಯಿಂದ ಬರುತ್ತದೆ.

"ಹೇಗಾದರು ಅರಸಿಕೆರೆಯವರೆಗೆ ಹೋಗಿ
ವರ್ಕ್‌ಷಾಪಿನಲ್ಲಿ ತೋರಿಸಿ ಸರಿಪಡಿಸೋಣ!"

ಸಂಜೆಯಾಗಿದೆ. ಆ ಸಮಯದಲ್ಲಿ ಪ್ರತಿನಿತ್ಯ ಮೈಸೂರಿನ ಉದಯರವಿಯಲ್ಲಿ ದೀಪ ಹೊತ್ತಿಸುತ್ತಿದ್ದುದು ಕವಿಯ ನೆನಪಿಗೆ ಬರುತ್ತದೆ.

ಅದೇ ಹೊತ್ತಿನಲ್ಲಿ
ದೂರ ಮೈಸೂರಿನಲ್ಲಿ, ಮನೆ "ಉದಯರವಿ"ಯಲ್ಲಿ,
ಮಗಳು ತಾರಿಣಿ ಗುಡಿಸಿ, ದೇವರ ಮನೆಯ ತೊಳೆದು,
ಹೂ ಮುಡಿಸಿ, ಸೊಡರ ಹೊತ್ತಿಸಿ, ಊದುಕಡ್ಡಿಯಿಟ್ಟು
ಒಂದು ವಾರದ ವರೆಗೆ ದೂರ ಪಯಣಕೆ ಹೋದ
ತಂದೆಯನು ನೆನೆದು
"ಸುಗಮವಾಗಲಿ ದೇವ, ಅಣ್ಣನಿಗೆ ಪಯಣ!
ಕ್ಷೇಮವಾಗಿಯೆ ಅಣ್ನ ತಿರುಗಿ ಬರಲಿ!"

ಎಂದು ಮಗಳು ಅತ್ತ ಪ್ರಾರ್ಥನೆ ಮಾಡುತ್ತಿದ್ದರೆ, ಇತ್ತ ಡ್ರೈವರನ ಅನುಭವದ ತಲೆಗೆ ಏನೋ ಹೊಳೆದಂತಾಯ್ತು! "ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ನೋಡಬೇಕಿತ್ತಣ್ಣಾ..." ಎಂದು ರಾಗವೆಳೆಯುತ್ತಾನೆ. "ನಿನ್ನ ಬೆಪ್ಪುತಕ್ಕಡಿತನವ ಮುಚ್ಚಿಕೊಳ್ಳಲು ಏನೇನೋ ಬೊಗಳ್ತೀಯಾ!" ಎಂಬ ಕವಿಯ ಮಾತಿನ ನಡುವೆ ಮತ್ತೆ ಕಾರು ಚಕ್ರದ ಕೀರಲು ಸ್ವರ ಕೇಳಿಸುತ್ತದೆ. ಮರಿ ಯಂತ್ರಜ್ಞನಾಗಿದ್ದ ತೇಜಸ್ವಿ ಮಾತ್ರ ಆ ಸಂದರ್ಭದಲ್ಲಿ ಕವಿಗಿಂತಲೂ ಸ್ಥಿತಪ್ರಜ್ಞನಾಗಿ-

"ಇಲ್ಲ, ಅಣ್ಣಾ, ಕಾರು ಹಾಳಾಗುತ್ತದೆ
ಹೀಗೇ ನಾವು ಮುಂದುವರಿದರೆ.
ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ನೋಡಿದರೆ
ಸರಿಹೋಗಬಹುದೇನೋ!"

ಎನ್ನುತ್ತಾನೆ. ರಸ್ತೆ ಎಡಕ್ಕೆ ಕಾರು ನಿಲ್ಲುತ್ತದೆ. ಮತ್ತೆ ಎಲ್ಲರೂ ಕೆಳಗಿಳಿಯುತ್ತಾರೆ. ಕೆಳಗಿಳಿದ ಕವಿಗೆ ಕಂಡ ನೋಟವಿದು.

ಗಡ್ಡ ಬಿಳಲಿಳಿದ ಹಸುರಿನ ದಟ್ಟ ಹೇರಾಲಗಳ ಹಂತಿ
ಸಾಲು ಸಾಲಾಗಿ ನಿಂತು ರಸ್ತೆಯಿಕ್ಕೆಲದಲ್ಲಿ
ನಮಗೆ ಗೌರವ ರಕ್ಷೆ ನೀಡಿದ್ದುವು.
ಕಾರ‍್ತಿಕದ ಹಿತ ಬಿಸಿಲು ಹಸುರು ಹೊಲಗಳ ಮೇಲೆ
ಹುಲುಸಾಗಿ ಹಸರಿಸಿತ್ತು.
ಹಣ್ಣು ತುಂಬಿದ ಆಲ ಹಕ್ಕಿಗಳನೌತಣಕೆ ಕರೆದಿತ್ತು:
ಲಕ್ಷ ಪಕ್ಷಿಯ ಕೊರಲು ಕಿವಿಗಿಂಪ ಸುರಿದಿತ್ತು.
ದಾರಿ ಬದಿ ಕಲ್ಲಬೋರ್ಡಿನೊಳಿತ್ತು ಬರೆಹ:
"ಸಿಡ್ಲೆಹಳ್ಳಿ!"

ಕವಿ ಸಿಡ್ಲೆಹಳ್ಳಿಯನ್ನು ಸುತ್ತಲೂ ಹುಡುಕುತ್ತಾರೆ. ಹಳ್ಳಿ ಕಾಣುವುದಿಲ್ಲ. ಆದರೆ ಹತ್ತಿರದಲ್ಲೆಲ್ಲೋ ಹಳ್ಳಿಯಿದ್ದಿರಬೇಕು ಎನ್ನುವುದಕ್ಕೆ ಸಾಕ್ಷಿಯಾಗಿ ಏಳೆಂಟು ವರ್ಷದ ಹುಡುಗನೊಬ್ಬ ಕುತೂಹಲದಿಂದ ಕಾರನ್ನು ನೋಡುತ್ತಾ ನಿಲ್ಲುತ್ತಾನೆ. ಡ್ರೈವರ್-ತೇಜಸ್ವಿ ಮಾತ್ರ ಕರ್ಮಯಜ್ಞದಲ್ಲಿ ತಲ್ಲೀನರಾಗಿಬಿಟ್ಟಿರುತ್ತಾರೆ.

ಜಾಕ್-ಟೈರ್ ಲಿವರ್-ಸ್ಪಾನರ್-ಚಕ್ರಕ್ಕೆ ಕಲ್ಲಾಪು.
ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ನೋಡಲಿಕ್ಕೆ
ಕಾರಿನಡಿ ಹೊಟ್ಟೆ ಮೇಲಾಗಿ ಮಲಗಿದನು ಡ್ರೈವರ್.
"ಓ ಹೋ ಹೋ ಹೋ ಅಣ್ಣಾ!"
"ಏನೋ?" ಕೇಳಿದನು ತೇಜಸ್ವಿ.
"ಟೈರ್ ರಾಡ್ ಎಂಡ್ ಅಲೈನ್‌ಮೆಂಟ್ ಅಲ್ಲ...."
"ಮತ್ತೇನೋ?"
"ಫ್ರಂಟ್ ವ್ಹೀಲ್ ಮೆಯ್ನ್ ಸ್ಪ್ರಂಗ್ ಸ್ಕ್ರೂ ಬಿದ್ದು ಹೋಗಿದೆ!"

ಮುಂದಿನ ಪುಟ ಓದಿ>>

Most Read Articles

Kannada
English summary
Kuvempu, the noted kannada poet has written about his journey in a car from Bangalore to Shimoga driven by his son Purna Chandra Tejasvi. The event has been deftly described by Dr B R Satyanarayana from Bangalore. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X