ಮಹೀಂದ್ರ ಹೈಬ್ರಿಡ್‌ ಕಾರು ಬರೋದು ಖಚಿತ

Posted By:

ಒಂದೆಡೆ ಇಂಧನ ದರಗಳು ದುಬಾರಿಯಾಗುತ್ತಿವೆ. ಇನ್ನೊಂದೆಡೆ ಪರಿಸರ ಮಾಲಿನ್ಯದ ಪರಿಣಾಮಗಳ ಭೀತಿಯೂ ಜೋರಾಗಿದೆ. ಪರಿಣಾಮವಾಗಿ ಪರಿಸರ ಸ್ನೇಹಿ ವಾಹನಗಳನ್ನು ಜನರು ಎದುರುನೋಡುತ್ತಿದ್ದಾರೆ. ಇಂತಹ ಸಮಯದಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಫ್ಯಾಕ್ಟರಿಯಿಂದ ಶೀಘ್ರದಲ್ಲಿ ಹೈಬ್ರಿಡ್ ಕಾರೊಂದು ಆಗಮಿಸುವ ಶುಭ ಸುದ್ದಿ ಬಂದಿದೆ.

ಮುಂದಿನ ಮೂರುವರ್ಷಗಳೊಳಗೆ ಮಹೀಂದ್ರ ಹೈಬ್ರಿಡ್ ಕಾರು ಆಗಮಿಸುವುದು ಖಚಿತವಾಗಿದೆ. "ಕಂಪನಿಯು ಹೈಬ್ರಿಡ್ ಕಾರು ಅಭಿವೃದ್ಧಿಪಡಿಸುವ ಕೆಲಸ ಆರಂಭಿಸಿದ್ದು, 2015ಕ್ಕೆ ಮುನ್ನ ಈ ಕಾರನ್ನು ರಸ್ತೆಗೆ ಪರಿಚಯಿಸುವ ಭರವಸೆ ಹೊಂದಿದ್ದೇವೆ" ಎಂದು ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಯುರೋಪ್ ಮಾರ್ಗದರ್ಶಿಗಳ ನೆರವಿನಿಂದ ಹದಿನಾಲ್ಕು ಜನರ ತಂಡವು ಚೆನ್ನೈನಲ್ಲಿರುವ ಕಂಪನಿಯ ಹೊಸ ಸಂಶೋಧನೆ ಮತ್ತು ಅಭಿವೃದ್ಧಿ(ಆರ್‌ಆಂಡ್‌ಡಿ) ಕೇಂದ್ರದಲ್ಲಿ ಹೈಬ್ರಿಡ್ ಕಾರು ಅಭಿವೃದ್ಧಿಪಡಿಸುತ್ತಿದ್ದಾರೆ. ಹೈಬ್ರಿಡ್ ಕಾರು ಯೋಜನೆಗೆ ಕಂಪನಿಯು ಈಗಾಗಲೇ 300 ಕೋಟಿ ರುಪಾಯಿ ಹೂಡಿಕೆ ಮಾಡಿದೆ.

ದೇಶದಲ್ಲಿ ಇಂಧನ ದರಗಳು ಗಗನಕ್ಕೇರುತ್ತಿರುವ ಇಂತಹ ಸಂದರ್ಭದಲ್ಲಿ ಮಹೀಂದ್ರ ಕಂಪನಿಯು ಹೈಬ್ರಿಡ್ ಕಾರು ಅಭಿವೃದ್ಧಿಪಡಿಸಲು ಹೊರಟಿರುವುದು ಅತ್ಯಂತ ಸೂಕ್ತವಾಗಿದೆ. ಮುಂಬರುವ ದಿನಗಳಲ್ಲಿ ಹೈಬ್ರಿಡ್ ಕಾರುಗಳಿಗೆ ಬೇಡಿಕೆಯು ಗಮನಾರ್ಹವಾಗಿ ಹೆಚ್ಚಾಗಲಿದೆ. ಹೈಬ್ರಿಡ್ ಕಾರುಗಳು ಕಡಿಮೆ ಪೆಟ್ರೋಲ್ ಅಥವಾ ಡೀಸೆಲ್ ಬಳಸುತ್ತದೆ. ಇದರ ರನ್ನಿಂಗ್ ವೆಚ್ಚವೂ ಕಡಿಮೆ.

2008ರಲ್ಲಿ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಸ್ಕಾರ್ಪಿಯೊ ಹೈಬ್ರಿಡ್ ಪರಿಕಲ್ಪನೆಯ ಕಾರೊಂದನ್ನು ಕಂಪನಿ ಪ್ರದರ್ಶಿಸಿತ್ತು. ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ನಡೆದ ವಾಹನ ಪ್ರದರ್ಶನದಲ್ಲಿ ಎಲೆಕ್ಟ್ರಿಕ್ ವೆರಿಟೊ ಪ್ರದರ್ಶಿಸಿತ್ತು.

ದೇಶದ ಹೈಬ್ರಿಡ್ ಕಾರು ಮಾರುಕಟ್ಟೆಗೆ ಆಗಮಿಸಿದ ಮೊದಲ ಕಾರು ಹೋಂಡಾ ಸಿವಿಕ್. ನಂತರ ಟೊಯೊಟಾ ಪ್ರಯಾಸ್ ಆಗಮಿಸಿತ್ತು. ಹೋಂಡಾ ಮತ್ತು ಟೊಯೊಟಾ ಹೈಬ್ರಿಡ್ ಬಳಗಕ್ಕೆ ಮಹೀಂದ್ರ ಜೊತೆಯಾಗಲಿದೆ. (ಕನ್ನಡ ಡ್ರೈವ್‌ಸ್ಪಾರ್ಕ್)

English summary
You could see Mahinidra hybrid cars in India within 3 years. Mahindra & Mahindra has announced that the ambitious Indian carmaker has started working on a hybrid car that will be launched by 2015.
Story first published: Friday, April 13, 2012, 10:13 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark