ಆರ್‌ಟಿಒದಲ್ಲಿ ಡ್ರೈವಿಂಗ್ ಲೈಸನ್ಸ್: ನನ್ನ ಕಹಿ ಅನುಭವ

Posted By:
ಸಾರ್ವಜನಿಕರ ನಿರಂತರ ದೂರುಗಳ ಪರಿಣಾಮವಾಗಿ ಕೊನೆಗೂ ಲೋಕಾಯುಕ್ತ ಪೊಲೀಸರು ಆರ್‌ಟಿಒ ಕಚೇರಿ ಮೇಲೆ ದಾಳಿ ಮಾಡಿದ್ದಾರೆ. ಆರ್‌ಟಿಒ ಕಚೇರಿಗಳಲ್ಲಿ ನಿತ್ಯ ಲಂಚ, ಅವ್ಯವಹಾರ, ಅಧಿಕಾರಿಗಳ ದರ್ಪ ಮಾಮೂಲು. ಆರ್‌ಟಿಒ ಕಚೇರಿ ಜೊತೆಗೆ ಸಾರ್ವಜನಿಕರ ಕೆಲವು ಅನುಭವಗಳು ಇಲ್ಲಿವೆ.

ಶಿವಶರಣ್ ಎಂಬಾತ ಎಲ್ಎಲ್ ಮಾಡಲು ಕೋರಮಂಗಲ ಆರ್ ಟಿಒ ಕಚೇರಿಗೆ ಹೋಗಿದ್ದ. ಅಲ್ಲಿ ಸಿಕ್ಕ ಮಧ್ಯವರ್ತಿಯೊಬ್ಬ 500 ರು. ಕೊಟ್ಟರೆ ಎಲ್ಎಲ್ ಮಾಡಿಸಿಕೊಡುವುದಾಗಿ ಹೇಳಿದ್ದ. ಆದರೆ ಈತ ಅದಕ್ಕೆ ಒಪ್ಪದೇ ತಾನೇ ಫಾರ್ಮ್ ಪಡೆದು, ಎಕ್ಸಾಂ ಬರೆದು ಬಿಟ್ಟ. ಸಂಜೆ ಬಂದ ಫಲಿತಾಂಶದಲ್ಲಿ ಫೇಲ್ ಆಗಿದ್ದ. ಮತ್ತೊಮ್ಮೆ ಶಿವಶರಣ್ ತನ್ನ ಸ್ನೇಹಿತನೊಬ್ಬನ ಎಲ್ಎಲ್ ಮಾಡಿಸಲು ಬಂದಾಗ ಮಧ್ಯವರ್ತಿ ಸಹಾಯ ಪಡೆದ. ಸುಲಭದಲ್ಲಿ ಪಾಸಾಗಿಬಿಟ್ಟನಂತೆ.

ಕೆಲವು ಡ್ರೈವಿಂಗ್ ಸ್ಕೂಲಿನವರಿಗೂ ಆರ್ ಟಿಒ ಮಧ್ಯವರ್ತಿಗಳಿಗೂ ಲಿಂಕ್ ಇರುತ್ತದೆ. ಡ್ರೈವಿಂಗ್ ಸ್ಕೂಲ್ ಮುಖಾಂತರ ಹೋದರೆ ಎಲ್ಎಲ್ ಅಥವಾ ಡಿಎಲ್ ಪಡೆಯುವುದು ಕಡುಕಷ್ಟವಲ್ಲ. ನೀವು ಡ್ರೈವಿಂಗ್ ಸ್ಕೂಲಿನವರ ಜೊತೆ ಕಿರಿಕ್ ಆಗಿ ವರ್ತಿಸುತ್ತಿದ್ದರೆ ಫೇಲ್ ಆಗೋ ಸಂಭವ ಜಾಸ್ತಿ. ಈ ಮಾಹಿತಿ ನೀಡಿದ್ದು ವಿಲ್ಸನ್ ಗಾರ್ಡನ್ ನಿವಾಸಿ ಶ್ರೀಧರ.

ಸಾರಿಗೆ ಕಚೇರಿಯಲ್ಲಿ ನಡೆಯುವ ಇನ್ನು ಕೆಲವು ಅವ್ಯವಹಾರಗಳ ಕುರಿತು ಬೆಂಗಳೂರು ಹೈಕೋರ್ಟ್ ವಕೀಲರಾದ ಜೆಪಿ ಹೇಳಿದ್ದು ಹೀಗೆ, "ಸೆಕೆಂಡ್ ಹ್ಯಾಂಡ್ ಕಾರು ಮಾಲಿಕತ್ವ ಹಸ್ತಾಂತರ ಮಾಡುವಾಗ ಲಂಚ ವ್ಯವಹಾರಗಳು ಹೆಚ್ಚು ನಡೆಯುತ್ತದೆ. ಇತ್ತೀಚೆಗೆ ನನ್ನ ಕ್ಲೈಂಟ್ ಒಬ್ಬರಿಗೆ ಈ ಅನುಭವವಾಗಿದೆ" ಎನ್ನುತ್ತಾರೆ.

ಮಂಡ್ಯ ಮೂಲದ ಸಂದ್ಯಾ ಸದ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದಾರೆ. ಅವರ ಸ್ಕೂಟಿಗೆ ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ ಮಾಡುವಲ್ಲಿಯೂ ಲಂಚಾಸುರನ ಹಾವಳಿಯಾಗಿತ್ತಂತೆ. ಸೀರಿಸ್ ಪ್ರಕಾರ ನಂಬರ್ ಆಯ್ಕೆ ಮಾಡುವುದಿದ್ದರೂ, ಹತ್ತು ಸಾವಿರ ರು., ಐದು ಸಾವಿರ ರು. ಬೆಲೆಯ ಇನ್ನಷ್ಟು ರಿಜಿಸ್ಟ್ರೇಷನ್ ನಂಬರುಗಳನ್ನು ತೋರಿಸಿ ನಿಮಗೆ ಬೇಕಾದ್ದು ಪಡೆದುಕೊಳ್ಳಿ ಎಂದರಂತೆ. ಇವರು ಒಲ್ಲೆ ಎಂದ್ಬಿಟ್ಟು ಸೀರಿಸ್ ಪ್ರಕಾರ ಪಾಲಿಗೆ ಬಂದದ್ದು ಪಂಚಾಮೃತವೆಂದು ಸಿಕ್ಕ ರಿಜಿಸ್ಟ್ರೇಷನ್ ನಂಬರ್ ಪಡೆದುಕೊಂಡಿರುವುದಾಗಿ ಹೇಳುತ್ತಾರೆ.

ಕನ್ನಡ ಡ್ರೈವ್ ಸ್ಪಾರ್ಕ್ ವರದಿಗಾರರು ಹೀಗೆ ಹತ್ತು ಹಲವು ಜನರನ್ನು ಭೇಟಿಯಾದಾಗ ಆರ್‌ಟಿಒ ವಿರುದ್ಧವಾಗಿಯೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಜಯನಗರದ ಮಹೇಶ್ ಮಾತ್ರಆರ್‌ಟಿಒ ಕಚೇರಿಗಳಲ್ಲಿನ ಕನ್ನಡಾಭಿಮಾನದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. "ನೀವು ಕನ್ನಡದಲ್ಲಿ ಎಕ್ಸಾಂ ಬರೆದ್ರೆ ಹೆಚ್ಚಿನ ಆರ್‌ಟಿಒ ಸಿಬ್ಬಂದಿಗಳು ಇಷ್ಟಪಡುತ್ತಾರೆ" ಎನ್ನುತ್ತಾರೆ.

ಆರ್‌ಟಿಒ ಜೊತೆಗೆ ನಿಮಗೂ ಸಿಹಿಕಹಿ ಅನುಭವವಾಗಿರಬಹುದು. ಅದನ್ನು ಕನ್ನಡ ಡ್ರೈವ್ ಸ್ಪಾರ್ಕ್ ಜೊತೆಗೆ ಹಂಚಿಕೊಳ್ಳಿ...

English summary
Transport Department Karnataka. Reader's opinion about Karnataka RTO. Add your experience here. 
Story first published: Saturday, March 31, 2012, 11:49 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark