ದೇಶದ ರಸ್ತೆಗೆ ಬಂದ ಅಸಾಮಾನ್ಯ ಶಕ್ತಿಯ ಭರ್ಜರಿ ಎಸ್‌ಯುವಿ

Posted By:

ಮೊದಲ ನೋಟಕ್ಕೆ ಥೇಟ್ ಮಿಲಿಟರಿ ವಾಹನಗಳನ್ನು ನೆನಪಿಸುವ ಅಸಾಮಾನ್ಯ ವಿನ್ಯಾಸದ ಭರ್ಜರಿ ಸ್ಪೋರ್ಟ್ಸ್ ಯುಟಿಲಿಟಿ ವಾಹನವೊಂದು ದೇಶದ ರಸ್ತೆಗೆ ಆಗಮಿಸಿದೆ. ಕಾಂಕ್ವೆಸ್ಟ್ ಇವಾಡೆ ಹೆಸರಿನ ಈ ಎಸ್‌ಯುವಿ ಆರಂಭಿಕ ದರ 8 ಕೋಟಿ ರುಪಾಯಿ. ಇದು ದೇಶದ ರಸ್ತೆಗೆ ಆಗಮಿಸಿದ ಪ್ರಪ್ರಥಮ ಅದ್ದೂರಿ, ಲಗ್ಷುರಿ ಎಸ್‌ಯುವಿ.

ಶಸ್ತ್ರಸಜ್ಜಿತ ವಾಹನಗಳ ನಿರ್ಮಾಣದಿಂದ ಜನಪ್ರಿಯವಾಗಿರುವ ಟೊರೊಂಟೊ ಮೂಲದ ಕಾಂಕ್ವೆಸ್ಟ್ ಐಎನ್ ಸಿ ಕಂಪನಿಯು ಇದೇ ಮೊದಲ ಬಾರಿಗೆ ಶಸ್ತ್ರಸಜ್ಜಿತವಲ್ಲದ ಎಸ್‌ಯುವಿ ಪರಿಚಯಿಸಿದೆ. ಇದರ ಹೆಸರು ಇವಾಡೆ (Evade). ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು ಪ್ರಕಾರ ಇವಾಡೆ ಅರ್ಥ ತಪ್ಪಿಸಿಕೊಳ್ಳು, ನುಣುಚಿಕೊಳ್ಳು, (ಸನ್ನಿವೇಶದಿಂದ) ಜಾರಿಕೊಳ್ಳು ಎಂದಾಗಿದೆ.

ಕಾಂಕ್ವೆಸ್ಟ್ ಕಂಪನಿಯ ನೈಟ್ ಎಕ್ಸ್ ವಿ ಎಂಬ ಶಸ್ತ್ರಸಜ್ಜಿತ ವಾಹನ ತುಂಬಾ ಫೇಮಸ್. ಆದರೆ ನೂತನ ಇವಾಡೆ ಶಸ್ತ್ರಸಜ್ಜಿತ ವಾಹನವಲ್ಲವಾದರೂ ಅದರಲ್ಲಿ ಗಮನ ಸೆಳೆಯುವ ವಿಶೇಷ ಫೀಚರುಗಳಿವೆ. ವಿಶಾಲ ಸ್ಥಳಾವಕಾಶ ಮತ್ತು ಐಷಾರಾಮಿ ಫೀಚರುಗಳಿರುವ ಅದ್ದೂರಿ ಕಾರಿದು. ಇದರ ಹೊರ ವಿನ್ಯಾಸವೇ ಅಮೋಘವಾಗಿದೆ.(ಚಿತ್ರನೋಡಿ).

ಇವಾಡೆ ಎಸ್‌ಯುವಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ದೊರಕುತ್ತದೆ. ಇದು ಫೋರ್ ವೀಲ್ ಡ್ರೈವ್ ಎಸ್‌ಯುವಿ. ನೂತನ ಬಾಡಿ ವಿನ್ಯಾಸ, ಅತ್ಯಾಕರ್ಷಕ ಹೊಸ ಹೆಡ್ ಲೈಟ್, ಹಿಂಭಾಗದಲ್ಲೂ ಡೋರ್, ಮೂರು ಸಾಲಿನ ಸನ್ ರೂಫ್ ಇತ್ಯಾದಿಗಳು ಕಣ್ಮನ ಸೆಳೆಯುತ್ತವೆ. ಅಲ್ಯುಮಿನಿಯಂ ಮಿಶ್ರಿತ ಸ್ಟೀಲ್ ಮೂಲಕ ಇಂಟಿರಿಯರ್ ವಿನ್ಯಾಸ ಮಾಡಲಾಗಿದೆ. ಇದು ನೈಟ್ ಎಕ್ಸ್ ವಿ ವಾಹನಕ್ಕಿಂತ ಹಗುರ.

2 ಪ್ಲಸ್ 2 ಸ್ಟೈಲಿನಲ್ಲಿ ಲಿಮೊ ಸೀಟ್ ಇವೆ. ಲ್ಯಾಪ್ ಟಾಪ್ ಟ್ರೇ, ಫ್ಲಾಟ್ ಪರದೆಯ ಟೆಲಿವಿಷನ್ ಸೇರಿದಂತೆ ಹಲವು ಫೀಚರುಗಳು ಇದರಲ್ಲಿವೆ. ಇದರ ಸ್ಟಿಯರಿಂಗ್ ವೀಲ್ ಸೇರಿದಂತೆ ಇಂಟಿರಿಯರ್ ಒಳಭಾಗದಲ್ಲಿ ಸ್ಟೈನ್ ಲೆಸ್ ಸ್ಟೀಲುಗಳನ್ನು ಅಳವಡಿಸಲಾಗಿದೆ. ಅಲ್ಯುಮಿನಿಯಂ ಬ್ಲಾಕಿನಿಂದ ಹ್ಯಾಂಡಲುಗಳನ್ನು ನಿರ್ಮಿಸಲಾಗಿದೆ.

ಇವಾಡೆ ಎಸ್‌ಯುವಿ ಒಳಭಾಗವು ಮಿಲಿಟರಿ ವಾಹನಗಳ ವಿನ್ಯಾಸ ಹೊಂದಿದೆ. ಚಾಲಕ ಮತ್ತು ಪ್ರಯಾಣಿಕರಿಗೆ ಟಚ್ ಸ್ಟ್ರೀನ್ ಆಕ್ಸೆಸ್ ಸೌಲಭ್ಯವಿದೆ. ಎಸ್‌ಯುವಿ ಹೊರಭಾಗದಲ್ಲಿರುವ ಸರ್ಚ್ ಲೈಟುಗಳನ್ನು ಬೇಕಾದ ಕಡೆ ತಿರುಗಿಸಲು ಜಾಯ್ ಸ್ಟಿಕ್ ಇದೆ. ಈ ಕಾರಲ್ಲಿ ರಾತ್ರಿಯಲ್ಲೂ ಗೋಚರಿಸುವ ಫ್ಲೈರ್ ನೈಟ್ ವಿಷನ್ ಕ್ಯಾಮರಾ ಸಿಸ್ಟಮ್ ಇದೆ. ಈ ಕ್ಯಾಮರಾಗಳು ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿವೆ.

ನೂತನ ಕಾಂಕ್ವೆಸ್ಟ್ ಇವಾಡೆ ಕಾರು ದೇಶದ ರಸ್ತೆಗೆ ಆಗಮಿಸುವುದು ಕೋಟ್ಯಾಧಿಪತಿಗಳ ಗಮನ ಸೆಳೆಯಬಹುದು. ಪರದೇಶದ ಅಸಾಮಾನ್ಯ ವಿನ್ಯಾಸದ ಅದ್ದೂರಿ ಕಾರೊಂದು ದೇಶದ ರಸ್ತೆಗೆ ಆಗಮಿಸಿದೆ. ದುಡ್ಡಿದ್ದವರು ಖರೀದಿಸಬಹುದು. ಅಥವಾ ಚಿತ್ರನೋಡಿ ವಾಹ್ ಎನ್ನಬಹುದು.

ಓದಿ: ಆವೇಶದ ಹಮ್ಮರ್ ಹಮ್ಮೀರ ದರ್ಶನ್ ತೂಗುದೀಪ

English summary
Toronto based Conquest Vehicles Inc. has launched unarmored version of its sports utility vehicle Evade in India. Conquest Evade SUV is priced at Rs. 8 crore (Ex-showroom).
Story first published: Monday, August 20, 2012, 12:57 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark