ನ್ಯಾನೋ ಬಂದ್ ಆಗಲ್ಲ; ಗರಿಗೆದರಿದ ಆಟೋ ಗೇರ್ ಶಿಫ್ಟ್ ಮಾದರಿ

Written By:

ಸತತ ವೈಫಲ್ಯದ ನಡುವೆಯೇ ಎಂದೆಗುಂದದ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಹೊಸ ವರ್ಷದಲ್ಲಿ ಹೊಸ ಯೋಜನೆಯೊಂದಿಗೆ ಮುಂದೆ ಬಂದಿದ್ದು, ನಿಕಟ ಭವಿಷ್ಯದಲ್ಲಿ ತನ್ನ ಜನಪ್ರಿಯ ಟಾಟಾ ನ್ಯಾನೋ ಆಟೋಮ್ಯಾಟಿಕ್ ಗೇರ್ ಶಿಫ್ಟ್ ಮಾದರಿಯನ್ನು ಪರಿಚಯಿಸುವ ಯೋಜನೆ ಹೊಂದಿದೆ. ಈ ಮೂಲಕ ನ್ಯಾನೋ ಮೂಲೆಗುಂಪು ಮಾಡುವ ವರದಿಗಳನ್ನು ಟಾಟಾ ಮೋಟಾರ್ಸ್ ವಕ್ತಾರ ಸಂಪೂರ್ಣವಾಗಿ ತಳ್ಳಿ ಹಾಕಿದ್ದಾರೆ.

ನ್ಯಾನೋ ಮಾದರಿಯನ್ನು ಇನ್ನಷ್ಟು ಶಕ್ತಿಶಾಲಿ ಮಾಡುವ ಇರಾದೆಯನ್ನು ಟಾಟಾ ಹೊಂದಿದೆ. ಕಳೆದ ವರ್ಷಾರಂಭದಲ್ಲಿ ನ್ಯಾನೋ ಪವರ್ ಸ್ಟೀರಿಂಗ್ ಟ್ವಿಸ್ಟ್ ಮಾದರಿಯನ್ನು ಪರಿಚಯಿಸಿದ್ದ ಟಾಟಾ ಸಂಸ್ಥೆಯೀಗ ಆಟೋಮ್ಯಾಟಿಕ್ ಮ್ಯಾನುವಲ್ ಟ್ರಾನ್ಸ್‌ಮಿಷನ್ (ಎಎಂಟಿ) ಮಾದರಿಯನ್ನು ಪರಿಚಯಿಸುವ ಇರಾದೆ ಹೊಂದಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಈ ಹಿಂದೆ 2014 ಆಟೋ ಎಕ್ಸ್ ಪೋದಲ್ಲಿ ಟಾಟಾ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿರುವುದನ್ನು ನೆನಪಿಸಿಕೊಳ್ಳಬಹುದು.

tata twist

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಟಾಟಾ ಸಂಸ್ಥೆಗೆ ಆಸರೆಯಾಗಿದ್ದ ಹೊಸ ಜೆಸ್ಟ್ ಕಾಂಪಾಕ್ಟ್ ಸೆಡಾನ್ ಮಾದರಿಯಲ್ಲೂ ಎಎಂಟಿ ವರ್ಷನ್ ಆಳವಡಿಸಲಾಗಿತ್ತು. ಇನ್ನು ಈಗಷ್ಟೇ ಬಿಡುಗಡೆಯಾಗಿರುವ ಬೋಲ್ಟ್ ಮಾದರಿಯಲ್ಲೂ ಎಎಂಟಿ ಪರಿಚಯವಾದರೆ ಅಚ್ಚರಿಪಡಬೇಕಾಗಿಲ್ಲ.

2014-15ರ ವರೆಗಿನ ಎಪ್ರಿಲ್‌ನಿಂದ ಡಿಸೆಂಬರ್ ವರೆಗೆ 11,333 ಯುನಿಟ್‌ಗಳಷ್ಟು ನ್ಯಾನೋ ಮಾರಾಟ ಮಾಡಲು ಸಂಸ್ಥೆ ಯಶಸ್ವಿಯಾಗಿತ್ತು. ಇದು 2013-14 ಎಪ್ರಿಲ್‌ನಿಂದ ಡಿಸೆಂಬರ್ ವರೆಗೆ ಹೋಲಿಸಿದರೆ (13,931 ಯುನಿಟ್) ಶೇಕಡಾ 18.64ರಷ್ಟು ಕುಸಿತ ಕಂಡಿದೆ.

2009ರಲ್ಲಿ ಒಂದು ಲಕ್ಷ ರು.ಗಳ ಎಕ್ಸ್ ಶೋ ರೂಂ ದರಗಳಲ್ಲಿ ಬಿಡುಗಡೆಯಾಗಿದ್ದ ಟಾಟಾ ಮಾಜಿ ಮುಖ್ಯಸ್ಥ ರತನ್ ಟಾಟಾ ಕನಸಿನ ಕೂಸಾಗಿರುವ ನ್ಯಾನೋ, ವಿಶ್ವದಲ್ಲೇ ಅತ್ಯಂತ ಅಗ್ಗದ ಕಾರೆಂಬ ಮನ್ನಣೆಗೆ ಪಾತ್ರವಾಗಿದ್ದರೂ ಗ್ರಾಹಕರ ನಿರೀಕ್ಷೆ ಮುಟ್ಟುವಲ್ಲಿ ವಿಫಲವಾಗಿತ್ತು.

2020ರ ವರೆಗೆ ವರ್ಷಕ್ಕೆ ಎರಡು ಪ್ರಮುಖ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಿರುವ ಟಾಟಾ, ಈಗಾಗಲೇ 2014 ಡಿಸೆಂಬರ್ ಮಾರಾಟದಲ್ಲಿ ಏರುಗತಿ ಸಾಧಿಸಿದೆ. 2013ನೇ ಸಾಲಿಗೆ ಹೋಲಿಸಿದರೆ (9,272) ಟಾಟಾ ಸಂಸ್ಥೆಯು 2014 ಡಿಸೆಂಬರ್ ತಿಂಗಳಲ್ಲಿ ಒಟ್ಟು 12,040 ಯುನಿಟ್‌ಗಳ ಮಾರಾಟ ದಾಖಲಿಸಿದೆ. ಈ ಮೂಲಕ ಶೇಕಡಾ 30ರಷ್ಟು ಮಾರಾಟ ಏರುಗತಿ ಸಾಧಿಸಿದೆ. ಸದ್ಯ ಜೆಸ್ಟ್ ಜೊತೆಗೆ ಈಗಷ್ಟೇ ಬಿಡುಗಡೆಯಾಗಿರುವ ಬೋಲ್ಟ್ ನೆರವಿನಿಂದ ಇನ್ನಷ್ಟು ಮಾರಾಟ ಏರಿಕೆಯನ್ನು ಟಾಟಾ ಗುರಿಯಾಗಿರಿಸಿದೆ.

English summary
Tata Motors planning to introduce AMT version of Nano 
Story first published: Friday, January 30, 2015, 17:39 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark