ಸುನಾಮಿ ಕಡಲೊಳು ತೇಲಿ ಬಂದ ಹರ್ಲಿ ಬೈಕ್
ಕಳೆದ ವರ್ಷ ಜಪಾನಿನಲ್ಲಿ ಸುನಾಮಿಯ ಅಬ್ಬರಕ್ಕೆ ಸಿಲುಕಿ ಸಾವಿರಾರು ಜನರು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿದ್ದರು. ಲೆಕ್ಕವಿಲ್ಲದಷ್ಟು ಆಸ್ತಿ ಪಾಸ್ತಿ ನಷ್ಟವಾಗಿತ್ತು. ಜಪಾನಿನ ಇಕೊ ಯೊಕೊಯಮಾ ಕೂಡ ಸುನಾಮಿಯಲ್ಲಿ ಮನೆಮಠ ಮತ್ತು ತನ್ನ ಕುಟುಂಬದ ಮೂವರನ್ನು ಕಳೆದುಕೊಂಡಿದ್ದ. ಜೊತೆಗೆ ತನ್ನ ಪ್ರೀತಿಯ ಬೈಕನ್ನೂ ಕಳೆದುಕೊಂಡಿದ್ದ!
ಸುನಾಮಿಗೆ ಸಿಲುಕಿ ಈತನ ಹರ್ಲಿ ಡೇವಿಡ್ ಸನ್ ಬೈಕೊಂದು ಸಾಗರದಲೆಯೊಂದಿಗೆ ಕೊಚ್ಚಿ ಹೋಗಿತ್ತು. ಕುಟುಂಬವೇ ಹೋದಮೇಲೆ ಕಳಕೊಂಡ ವಾಹನದ ಕುರಿತು ಚಿಂತೆ ಮಾಡುವುದರಲ್ಲಿ ಅರ್ಥವಿಲ್ಲ. ಸದ್ಯ ನನ್ನ ಪ್ರಾಣವುಳಿಯಿತ್ತಲ್ಲವೆಂದು ಸಮಧಾನದಿಂದ ಇದ್ದ.
ಆದರೆ ಅಚ್ಚರಿಯೆಂಬಂತೆ ಈ ಹರ್ಲಿ ಡೇವಿಡ್ ಸನ್ ಬೈಕ್ ಕೆನಡಾದಲ್ಲಿ ಪತ್ತೆಯಾಗಿದೆ. ಅಂದ್ರೆ ಸುನಾಮಿಗೆ ಸಿಕ್ಕಿ ಕಡಲಿಗೆ ಬಿದ್ದ ಈ ಬೈಕನ್ನು ಸಾಗರದ ಅಲೆಗಳು ಕಾರ್ಗೊ ಕಂಟೈನರ್ ಹಡಗೊಂದಕ್ಕೆ ಸಿಲುಕಿಸಿಬಿಟ್ಟಿದವು. ಈ ಬೈಕಿನ ನಂಬರ್ ಪ್ಲೇಟ್ ಮೂಲಕ ಮಾಲೀಕನ ಹೆಸರನ್ನು ಪತ್ತೆ ಮಾಡಲಾಯಿತು.
"ಈ ಬೈಕ್ ವಾಪಸ್ ಸಿಕ್ಕಿದು ನನಗೆ ಸಂತೋಷವನ್ನುಂಟುಮಾಡಿದೆ. ನನ್ನ ಬೈಕ್ ನನಗೆ ತಲುಪಿಸಿದವರಿಗೆ ಧನ್ಯವಾದಗಳು" ಎಂದು ಸುದ್ದಿ ವಾಹಿನಿಗಳಿಗೆ ನೀಡಿದ ಸಂದರ್ಶನದಲ್ಲಿ ಆತ ಹೇಳುತ್ತಿದ್ದ. ಅದೇ ರೀತಿ ಕಳೆದುಕೊಂಡ ತನ್ನ ಕುಟುಂಬದವರೂ ಜೀವಂತವಾಗಿ ಸಿಕ್ಕಿದರೆ ಎಷ್ಟು ಚೆನ್ನಾಗಿತ್ತು ಎಂದು ಆತನ ದುಃಖಭರಿತ ಕಣ್ಣುಗಳು ಹೇಳುತ್ತಿದ್ದವು.
ಸಾಗರದ ಉಪ್ಪು ನೀರಲ್ಲಿ ಹಲವು ಸಮಯ ಕಳೆದಿರುವ ಹರ್ಲಿ ಡೇವಿಡ್ ಸನ್ ಬೈಕನ್ನು ಸದ್ಯ ಚಾಲನೆ ಮಾಡುವ ಸ್ಥಿತಿಯಲಿಲ್ಲ. ಇದರ ರಿಪೇರಿಗೆ ಸುಮಾರು 40 ಸಾವಿರ ಡಾಲರ್ ಬೇಕಂತೆ. ಅಂದ್ರೆ ಹೊಸ ಹರ್ಲಿ ಡೇವಿಡ್ ಸನ್ ಬೈಕಿನ ಎರಡು ಪಟ್ಟು ವೆಚ್ಚ ಮಾಡಬೇಕಿದೆ.
ವಿಶೇಷವೆಂದರೆ ಈ ಬೈಕ್ ಪೆಸಿಫಿಕ್ ಸಾಗರದಲ್ಲಿ ಸುಮಾರು 6,500 ಕಿ.ಮೀ. ತೇಲಿ ಹೋಗಿದೆ. ಇದೀಗ ಅಳುವ ಕಡಲೊಳು ಹರ್ಲಿ ಡೇವಿಡ್ ಸನ್ ಮತ್ತೆ ತೇಲಿ ಬಂದಿದೆ.


Click it and Unblock the Notifications









