ದೆಹಲಿಯಲ್ಲಿ ಮಿತಿಮೀರಿದ ವಾಯು ಮಾಲಿನ್ಯವನ್ನು ನಿಯಂತ್ರಿಸಲು ಸಮ-ಬೆಸ ಸಂಖ್ಯೆ ವಾಹನಗಳ ಸಂಚಾರ ನೀತಿ ಜಾರಿಗೆ ತರಲು ದೆಹಲಿ ಸರ್ಕಾರ ನಿರ್ಧರಿಸಿತ್ತು. ಹೊಸ ಬೆಳವಣಿಗೆಯಲ್ಲಿ, ನೀತಿಯನ್ನು ಜಾರಿಗೊಳಿಸುವ ನಿರ್ಧಾರವನ್ನು ವಾಪಸ್ ಪಡೆದಿದೆ ಎಂಬ ಮಾಹಿತಿ ಸಿಕ್ಕಿದೆ.
ಹೌದು, ಸಮ-ಬೆಸ ಸಂಚಾರ ನಿಯಮವನ್ನು ಜಾರಿಗೊಳಿಸಲು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಕಳೆದ ಶನಿವಾರ ಷರತ್ತುಬದ್ಧ ಅನುಮತಿ ನೀಡಿತ್ತು. ಸರ್ಕಾರ ಕೂಡ ಈ ನೀತಿಯನ್ನು ದೆಹಲಿಯಾದ್ಯಂತ ಜಾರಿಗೊಳಿಸಲು ಸಕಲ ಸಿದ್ದತೆ ನೆಡೆಸಿತ್ತು ಕೂಡ.
ಇದರ ಬೆನ್ನಲ್ಲೇ ಆಶ್ಚರ್ಯಕರ ನಿರ್ಧಾರವನ್ನು ತೆಗೆದುಕೊಂಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರವು ಸಮ-ಬೆಸ ಸಂಖ್ಯೆ ವಾಹನ ಸಂಚಾರ ನಿಯಮವನ್ನು ಜಾರಿಗೊಳಿಸದೇ ಇರಲು ನಿರ್ಧರಿಸಿದೆ.
ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ವಿಕೋಪಕ್ಕೆ ಹೋಗಿದ್ದು, ಇದನ್ನು ಹತೋಟಿಗೆ ತರಲು ಮೂರನೇ ಬಾರಿಗೆ ನವೆಂಬರ್ 13 ರಿಂದ 17 ರವರೆಗೆ ಸಮ ಬೆಸ ಸಂಚಾರ ನಿಯಮವನ್ನು ಜಾರಿಗೆ ತರಲು ಮುಂದಾಗಿತ್ತು.
ಆದರೆ, ಕಳೆದ ಎರಡೂ ಅವಧಿಯಲ್ಲಿ ನಗರದ ಮಾಲಿನ್ಯ ಪ್ರಮಾಣ ಕಡಿಮೆಯಾಗಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ ವರದಿಗಳು ಹೇಳಿವೆ. ವಾಸ್ತವ ಹೀಗಿರುವಾಗ ನ. 13ರಿಂದ ನ.17ರವರೆಗೆ ಮತ್ತೆ ಈ ನಿಯಮ ಜಾರಿಗೆ ತರುವುದರಲ್ಲಿ ಅರ್ಥವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ನಿಯಮ ಜಾರಿಯಿಂದ ವಾಯು ಗುಣಮಟ್ಟ ಏರಿಕೆಯಾಗಿದೆ ಎಂಬುದು ಖಾತ್ರಿಯಾಗುವವರೆಗೂ ಅದನ್ನು ಜಾರಿಗೊಳಿಸಬೇಡಿ ಎಂದಿರುವ ಎನ್‌ಜಿಟಿ, ಈ ಹೊಸ ನಿಯಮದಿಂದ ದ್ವಿಚಕ್ರ ವಾಹನ ಮತ್ತು ಮಹಿಳೆಯರಿಗೆ ವಿನಾಯಿತಿ ನೀಡಿರುವುದು ಏಕೆ ಎಂದು ಪ್ರಶ್ನಿಸಿದೆ.
ಬೆಂಗಳೂರಿನಲ್ಲಿ ಸಮ-ಬೆಸ ನಿಯಮ ?
ದೆಹಲಿ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ವಾಹನ ಸಂಚಾರಕ್ಕೆ ಸಮ-ಬೆಸ ಪದ್ದತಿ ಜಾರಿಗೊಳಿಸುವ ಕುರಿತು ಚಿಂತನೆ ನಡೆಸುವುದಾಗಿ ಗೃಹಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಯೂ ಮಾಲಿನ್ಯ ಹೆಚ್ಚಳವಾಗುತ್ತಿದೆ. ದೆಹಲಿಯಲ್ಲಿ ಅತಿ ಹೆಚ್ಚಿನ ಮಾಲಿನ್ಯದಿಂದಾಗಿ ಮತ್ತೆ ಸಮ-ಬೆಸ ಪದ್ಧತಿ ಜಾರಿಗೆ ತರಲಾಗುತ್ತಿದೆ. ದೆಹಲಿ ಮಾದರಿ ಅನುಸರಿಸಲು ಸಾಧ್ಯವೆ ಎಂದು ಅಧಿಕಾರಿಗಳೊಂದಿಗೆ ಚರ್ಚಿಸುತ್ತೇವೆ ಎಂದರು.
ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಅಪಾಯದ ಮಟ್ಟಕ್ಕೆ ಏರಿದ್ದು, ಅದನ್ನು ತಡೆಯುವುದಕ್ಕಾಗಿ ದೆಹಲಿ ಸರ್ಕಾರ ನವೆಂಬರ್ 13ರಿಂದ 5 ದಿನಗಗಳ ಕಾಲ ಸಮ-ಬೆಸ ನಿಯಮ ಜಾರಿಗೆ ತರಲು ಮುಂದಾಗಿತ್ತು, ಸದ್ಯ ತನ್ನ ನಿರ್ದಾರದಿಂದ ಹಿಂದೆ ಸರಿದಿದ್ದು, ಈ ಮಾಹಿತಿ ರಾಮಲಿಂಗಾರೆಡ್ಡಿ ಅವರಿಗೆ ತಿಳಿದಿಲ್ಲ ಎಂದು ಕಾಣುತ್ತದೆ.
ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Subscribe to Kannada DriveSpark