ಎಸ್‌ಎಕ್ಸ್-4ಗೆ ಗೇಟ್‌ಪಾಸ್; ಸದ್ಯದಲ್ಲೇ ಸಿಯಾಝ್ ಎಂಟ್ರಿ
ನಿಮಗಿಂದು ಸಿಹಿ-ಕಹಿ ಸುದ್ದಿಗಳಿವೆ. ಮೊದಲು ಕಹಿ ಸುದ್ದಿಯನ್ನೇ ಹೇಳಲು ಬಯಸುತ್ತೇವೆ. ಅದೇನೆಂದರೆ ದೇಶದ ಅತಿದೊಡ್ಡ ಪ್ರಯಾಣಿಕ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ, ತನ್ನ ಜನಪ್ರಿಯ (ಭಾರತದಲ್ಲಿ ನಿರೀಕ್ಷಿಸಿದಷ್ಟು ಯಶ ಕಂಡಿಲ್ಲ) ಎಸ್‌ಎಕ್ಸ್-4 ಮಾದರಿ ಉತ್ಪಾದನೆಯನ್ನು ಸ್ಥಗಿತಗೊಳಿಸಿದೆ.
ಎಟಿಯೋಸ್ ಕ್ರಾಸ್ ಲಾಂಚ್ ಅಧಿಕೃತ
ಹಾಗಾದ್ದಲ್ಲಿ ಸಿಹಿ ಸುದ್ದಿ ಏನಾಂತೀರಾ? ಹೌದು, ನೀವು ಊಹೆ ನಿಜ; ಮಗದೊಂದು ಅತ್ಯಾಕರ್ಷಕ ಕಾರನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಿಲು ಮಾರುತಿ ಸಿದ್ಧತೆ ನಡೆಸುತ್ತಿದೆ. ವರದಿಗಳ ಪ್ರಕಾರ ಎಸ್‌ಎಕ್ಸ್-4 ಬದಲಿ ಮಾದರಿಯಾಗಿರುವ ಸಿಯಾಝ್ ಮುಂಬರುವ ಹಬ್ಬದ ಆವೃತ್ತಿ ವೇಳೆಯಲ್ಲಿ ಲಾಂಚ್ ಆಗಲಿದೆ. ಪ್ರಸಕ್ತ ಸಾಲಿನ ದ್ವಿತಿಯಾರ್ಧದಲ್ಲಿ, ಅಂದರೆ ಜುಲೈನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಸಿಯಾಝ್ ಬಿಡುಗಡೆಯಾಗುವ ಸಾಧ್ಯತೆಯಿದೆ.

ನಿಮ್ಮ ಮಾಹಿತಿಗಾಗಿ, ಈ ಹಿಂದೆ ಫೆಬ್ರವರಿ ತಿಂಗಳಲ್ಲಿ ನಡೆದ 2014 ಆಟೋ ಎಕ್ಸ್ ಪೋದಲ್ಲಿ ಮಾರುತಿ ಸಿಯಾಝ್ ಭರ್ಜರಿ ಪ್ರದರ್ಶನ ಕಂಡಿತ್ತು. ಹಾಗೆಯೇ ಇತ್ತೀಚೆಗಷ್ಟೇ ನಡೆದ ಬೀಜಿಂಗ್ ಮೋಟಾರು ಶೋದಲ್ಲಿ ನಿರ್ಮಾಣ ಸಿದ್ಧ ವಾಹನವನ್ನು ಅನಾವರಣಗೊಳಿಸಿತ್ತು.

ಬಲ್ಲ ಮೂಲಗಳ ಪ್ರಕಾರ ಮಾರುತಿ ಸುಜುಕಿ ಮಾನೇಸರ್ ಘಟಕದಲ್ಲಿ ಸಿಯಾಝ್ ಟ್ರೈಲ್ ವರ್ಷನ್ ತಯಾರಿಸಲಾಗಿದೆ. ಇದು ಹಳೆಯ ಎಸ್‌ಎಕ್ಸ್-4 ಮಾದರಿಗೆ ಹೋಲಿಸಿದರೆ ಪ್ರೀಮಿಯಂ ವರ್ಷನ್ ಆಗಿರಲಿದ್ದು, ಹೆಚ್ಚು ಆಯಾಮ ಪಡೆದುಕೊಳ್ಳಲಿದೆ.

ಪ್ರಮುಖವಾಗಿಯೂ ಇದು ಫೋಕ್ಸ್‌ವ್ಯಾಗನ್ ವೆಂಟೊ, ಫಿಯೆಟ್ ಲಿನಿಯಾ, ಹ್ಯುಂಡೈ ವರ್ನಾ ಹಾಗೂ ಸೆಗ್ಮೆಂಟ್ ಲೀಡರ್ ಹೋಂಡಾ ಸಿಟಿ ಆವೃತ್ತಿಗಳಿಗೆ ಪೈಪೋಟಿ ಒಡ್ಡಲಿದೆ.

ನೂತನ ಸಿಯಾಝ್ 1.3 ಲೀಟರ್ ಮಲ್ಟಿಜೆಟ್ ಡೀಸೆಲ್ ಹಾಗೂ 1.4 ಲೀಟರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಸಾಧ್ಯತೆಯಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ದೊಡ್ಡದಾದ 1.6 ಲೀಟರ್ ಪೆಟ್ರೋಲ್ ಎಂಜಿನ್ ಸಹ ಆಳವಡಿಕೆಯಾಗುವ ಸಾಧ್ಯತೆಯಿದೆ.

2007ನೇ ಇಸವಿಯಲ್ಲಿ ಲಾಂಚ್ ಆಗಿದ್ದ ಎಸ್‌ಎಕ್ಸ್-4 ದರ 7.14 ಲಕ್ಷ ರು.ಗಳಿಂದ 9.53 ಲಕ್ಷ ರು.ಗಳ (ದೆಹಲಿ ಎಕ್ಸ್ ಶೋ ರೂಂ) ವರೆಗಿತ್ತು. ಇದೀಗ ಸಿಯಾಝ್ ಸಹ ಸ್ಮರ್ಧಾತ್ಮಕ ದರಗಳಲ್ಲಿ ಆಗಮನವಾಗುವ ನಿರೀಕ್ಷೆಯಿದೆ.


Click it and Unblock the Notifications








