"ಈಗ" ದಾಳಿಯಿಂದ ಭೀಕರ ಅಪಘಾತ , ಸುದೀಪ ಪಾರು

Posted By:
ಕನ್ನಡ ಚಿತ್ರನಟ ಸುದೀಪ್ ಖಳನಾಯಕನಾಗಿ ನಟಿಸಿರುವ ತೆಲುಗಿನ "ಈಗ" ಚಿತ್ರದಲ್ಲಿ ಭೀಕರ ಅಪಘಾತದ ದೃಷ್ಯವೊಂದಿದೆ. "ಈಗ" ಯಾನೆ "ನೊಣ"ವು ಖಳನಾಯಕನ್ನು ಕೊಲೆ ಮಾಡಲು ಯತ್ನಿಸುವ ಸಂಚುಗಳಲ್ಲಿ ಇದೂ ಒಂದು. ಅದರಲ್ಲಿ ವಾಹನ ಸವಾರರಿಗೆ ಕಲಿತುಕೊಳ್ಳಬೇಕಾದ ನೀತಿಗಳೂ ಇವೆ. ಇಲ್ಲಿದೆ "ಈಗ" ಮೂಲಕ ಸುರಕ್ಷತೆಯ ಡ್ರೈವಿಂಗ್ ಪಾಠ.

ನಾಯಕಿಯನ್ನು ವಿಮಾನ ನಿಲ್ದಾಣದಲ್ಲಿ ಖಳನಾಯಕ ಭೇಟಿಯಾಗಲು ನಿಗದಿಯಾದ ಹಿಂದಿನ ರಾತ್ರಿ ನೊಣದ ಉಪಟಳಕ್ಕೆ ಸಿಲುಕಿ ಸುದೀಪ ನಿದ್ದೆಯಿಲ್ಲದ ರಾತ್ರಿ ಕಳೆದಿರುತ್ತಾನೆ. ವಿಮಾನ ನಿಲ್ದಾಣದಿಂದ ನಾಯಕಿ ಕರೆ ಮಾಡಿದಾಗ ಧಾವಂತದಿಂದ ಎದ್ದು ಕಾರಿನಲ್ಲಿ ವಿಮಾನ ನಿಲ್ದಾಣದತ್ತ ಖಳನಾಯಕ ದೌಡಾಯಿಸುತ್ತಾನೆ. ನೆನಪಿಡಿ. ಆತ ರಾತ್ರಿ ಪೂರ್ತಿ ನಿದ್ದೆಗೆಟ್ಟಿರುತ್ತಾನೆ.

ಆತ ನಾಯಕಿಯನ್ನು ಭೇಟಿಯಾಗುವುದನ್ನು ತಪ್ಪಿಸಲು "ಈಗ" ಯತ್ನಿಸುತ್ತದೆ. ಟ್ರಾಫಿಕ್ ಪೊಲೀಸ್ ಗೆ ಗೊಂದಲವುಂಟು ಮಾಡಿ ಟ್ರಾಫಿಕನ್ನೇ ಅಲ್ಲೋಲ ಕಲ್ಲೋಲ ಮಾಡಿಬಿಡುತ್ತದೆ. ಕಾರನ್ನು ನಡುರಸ್ತೆಯಲ್ಲೇ ಬಿಟ್ಟು ಬೇರೊಂದು ಫೊಕ್ಸ್ ವ್ಯಾಗನ್ ಪಸ್ಸಾಟ್ ಕಾರಿನ ಮೂಲಕ ಸುದೀಪ ಅತಿವೇಗದಲ್ಲಿ ಡ್ರೈವಿಂಗ್ ಮಾಡುತ್ತಾನೆ.

ಶರವೇಗದಲ್ಲಿ ಆತನ ಕಾರನ್ನು ನೊಣ ಹಿಂಬಾಲಿಸುತ್ತದೆ. ಸ್ಟಿಯರಿಂಗ್ ವೀಲ್ ಮೇಲೆ ಕುಳಿತಿದ್ದ ಪುಟ್ಟ ನೊಣವನ್ನು ನೋಡಿ ಸುದೀಪ ಬೆಚ್ಚಿ ಬೀಳುತ್ತಾನೆ. ಕೆಲವೇ ಸೆಕೆಂಡ್ ಮೈ ಮರೆಯುತ್ತಾನೆ. ಈಗ ದಾಳಿ ಮಾಡುತ್ತದೆ. ಕಾರು ನಿಯಂತ್ರಣ ತಪ್ಪುತ್ತದೆ.

ಖಳನಾಯಕನ ನಿಯಂತ್ರಣ ತಪ್ಪಿದ ಕಾರು ಅಡ್ಡಾದಿಡ್ಡಿಯಾಗಿ ಚಲಿಸಿ ರಸ್ತೆಯಲ್ಲಿದ್ದ ವಾಹನಗಳಿಗೆ ಡಿಕ್ಕಿ ಹೊಡೆದು, ಆಕಾಶದತ್ತ ನೆಗೆದು, ಮತ್ತೆ ರಸ್ತೆಗೆ ಉರುಳಿ, ಎದುರಲ್ಲಿ ವೇಗವಾಗಿ ಬರುತ್ತಿರುವ ಲಾರಿಗೆ ಡಿಕ್ಕಿ ಹೊಡೆದು ಅಪ್ಪಚ್ಚಿಯಾಗುತ್ತದೆ. ಸುದೀಪ ಸತ್ತನೆಂದು "ಈಗ" ವಿಜ್ರಂಭಿಸುತ್ತದೆ.

ಆದರೆ ಆ ಭೀಕರ ಅಪಘಾತದ ಸಂದರ್ಭದಲ್ಲಿ ಸ್ಟಿಯರಿಂಗ್ ವೀಲ್ ನೊಳಗಿರುವ ಏರ್ ಬ್ಯಾಗ್ ಹೊರಬಂದು ಸುದೀಪನ್ನು ರಕ್ಷಿಸುತ್ತದೆ. ಏರ್ ಬ್ಯಾಗ್ ಕಾರ್ಯನಿರ್ವಹಣೆ ತಿಳಿದುಕೊಳ್ಳುವರು ಈ ಚಿತ್ರ ನೋಡಬಹುದು. ಮೈನವಿರೇಳಿಸುವ ಈ ಅಪಘಾತದ ದೃಷ್ಯದಲ್ಲಿ ವಾಹನ ಸವಾರರು ಕಲಿತುಕೊಳ್ಳಬೇಕಾದ ಕೆಲವು ಪಾಠಗಳಿವೆ.

* ನಿದ್ದೆಗೆಟ್ಟಿರುವಾಗ, ಮಾನಸಿಕ ಒತ್ತಡದಲ್ಲಿದ್ದಾಗ ವಾಹನ ಡ್ರೈವಿಂಗ್ ಮಾಡುವುದು ಸುರಕ್ಷಿತವಲ್ಲ.

* ಡ್ರೈವಿಂಗ್ ಸಮಯದಲ್ಲಿ ಕೆಲವೇ ಸೆಕೆಂಡು ಮೈ ಮರೆತರೂ ಭಾರಿ ಬೆಲೆ ತೆರಬೇಕಾದಿತು. ಸ್ಟಿಯರಿಂಗ್ ವೀಲ್ ಮೇಲೆ ಕುಳಿತಿರುವ ನೊಣವನ್ನು ನೋಡಿ ಸುದೀಪ ಕೆಲವೇ ಸೆಕೆಂಡ್ ಮೈಮರೆತ ದೃಷ್ಯ ನೆನಪಿಸಿಕೊಳ್ಳಿ.

* ಕಾರಿನಲ್ಲಿ ಸುರಕ್ಷತೆಯ ಫೀಚರುಗಳಿರಲಿ. ಭೀಕರ ಅಪಘಾತದ ಸಂದರ್ಭದಲ್ಲಿ ಖಳನಾಯಕ ಸೀಟ್ ಬೆಲ್ಟ್ ಧರಿಸಿದ್ದ. ಆ ಕಾರಲ್ಲಿ ಏರ್ ಬ್ಯಾಗ್ ಇತ್ತು.

* ಅತಿವೇಗದ ಪ್ರಯಾಣ ಅಪಾಯಕಾರಿ. ನೊಣದ ದಾಳಿಗೆ ಸಿಲುಕಿದಾಗ ಖಳನಾಯಕನ ಕಾರು ಅತ್ಯಂತ ವೇಗದಲ್ಲಿತ್ತು. ಇದು ಅಪಘಾತದ ಭೀಕರತೆ ಹೆಚ್ಚಿಸಿತ್ತು.

ವಾಹನ ಚಾಲನೆ ಮಾಡುವಾಗ ಮನಸು ಪ್ರಶಾಂತವಾಗಿರಲಿ. ಸುರಕ್ಷಿತವಾಗಿ ವಾಹನ ಚಾಲನೆ ಮಾಡಿ. ಹ್ಯಾಪಿ ಡ್ರೈವಿಂಗ್.

English summary
Sudeep's Road Accident In Eega. Eega throws Sudeep to a extremely shot accident scene which is picturised well. Car hitting a lorry. But Sudeep does not die, thanks to the Airbag. Sleep deprivation, a second's negligence or speed driving may end up fatal.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark