EMI ಕಟ್ಟುವವರಿಗೆ ದೊಡ್ಡ ಆಘಾತ ನೀಡಿದ ಆರ್‌ಬಿಐ.. ರೆಪೊ ದರ ಮತ್ತೆ ಹೆಚ್ಚಳ

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಜನ ಸಾಮಾನ್ಯರಿಗೆ ದೊಡ್ಡ ಆಘಾತ ನೀಡಿದೆ. ಬುಧವಾರ ರೆಪೊ ದರವನ್ನು 35 ಬೇಸಿಸ್ ಪಾಯಿಂಟ್‌ ಅಂದರೆ ಶೇಕಡ 6.25 ಏರಿಸಿದೆ. ಆರ್‌ಬಿಐ ಮಾಡಿರುವ ಈ ತೀರ್ಮಾನದಿಂದ ಕಾರು, ಬೈಕ್, ಮನೆ ಮತ್ತು ಇತರೆ ವಿವಿಧ ಸಾಲಗಳ ಮೇಲೆ ಪಾವತಿಸಬೇಕಾದ ಇಎಂಐ ಅನ್ನು ವಾಣಿಜ್ಯ ಬ್ಯಾಂಕುಗಳು ಹೆಚ್ಚಿಸಬಹುದು.

ಉಕ್ರೇನ್, ರಷ್ಯಾ ಯುದ್ಧದ ಪರಿಣಾಮ ಹೆಚ್ಚುತ್ತಿರುವ ಜಾಗತಿಕ ಆರ್ಥಿಕ ಹಿಂಜರಿತದ ನಡುವೆ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತದ ಹಣದುಬ್ಬರವನ್ನು ಸಹಬದಿಗೆ ತರುವ ಪ್ರಯತ್ನವಾಗಿ ಆರ್‌ಬಿಐ, ರೆಪೊ ದರವನ್ನು ಹೆಚ್ಚಿಸುವ ನಿರ್ಧಾರವನ್ನು ಮಾಡಿದೆ ಎಂದು ಹೇಳಲಾಗಿದೆ. ವಿತ್ತೀಯ ನೀತಿ ಸಮಿತಿ ಸಭೆಯಲ್ಲಿ ಮಾಡಿದ ಮೌಲ್ಯಮಾಪನದ ಆಧಾರದ ಮೇಲೆ ಪ್ರಸ್ತುತ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಸ್ವತಃ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರೇ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್‌ನಲ್ಲಿ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ (ಬಿಪಿಎಸ್) ಅಂದರೆ ಶೇಕಡ 5.9ಕ್ಕೆ ಹೆಚ್ಚಿಸಿತ್ತು. ಆಗಸ್ಟ್‌ನಲ್ಲಿ ತನ್ನ ಅರ್ಧವಾರ್ಷಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ, ಆರ್‌ಬಿಐ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್‌ (ಬಿಎಸ್‌ಪಿ) ಅಂದರೆ, ಶೇಕಡ 5.4ಕ್ಕೆ ಹೆಚ್ಚಳ ಮಾಡಿತ್ತು. ಜೂನ್‌ನಲ್ಲಿ ಆರ್‌ಬಿಐ ದರವನ್ನು 50 ಬೇಸಿಸ್ ಪಾಯಿಂಟ್‌ ಹಾಗೂ ಮೇ ತಿಂಗಳಲ್ಲಿ ಆರ್‌ಬಿಐ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್‌ ಅಂದರೇ ಶೇಕಡ 4.40 ಹೆಚ್ಚಳ ಮಾಡಿತ್ತು.

ರೆಪೊ ದರ ಏರಿಕೆಯಿಂದ ಹೆಚ್ಚಿನ ಇಎಂಐ ಪಾವತಿ ಏಕೆ?:
ರೆಪೊ ದರ ಎಂದರೆ ವಾಣಿಜ್ಯ ಬ್ಯಾಂಕ್‌ಗಳು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ)ನಿಂದ ಹಣವನ್ನು ಎರವಲು ಪಡೆಯುವ ದರವಾಗಿದೆ. ಆದ್ದರಿಂದ, ರಿಸರ್ವ್ ಬ್ಯಾಂಕ್‌ನಿಂದ ಸಾಲದ ದರವನ್ನು ಹೆಚ್ಚಿಸುವುದು ಅಂದರೆ ಬ್ಯಾಂಕುಗಳಿಂದ ಚಿಲ್ಲರೆ ಮತ್ತು ಇತರೆ ಸಾಲಗಳಿಗಾಗಿ ಎರವಲು ಪಡೆಯುವ ವೆಚ್ಚದಲ್ಲಿ ಹೆಚ್ಚಳವಾಗಿದೆ ಎಂದು ಅರ್ಥ. ಬಹುತೇಕ ರೆಪೋ ದರ ಏರಿಕೆ ಸಾಲಗಾರರಿಗೆ ಬಡ್ಡಿ ರೂಪದಲ್ಲಿ ವರ್ಗಾಯಿಸಲ್ಪಡುತ್ತದೆ.

ನಿಮ್ಮಇಎಂಐನಲ್ಲಿ ಎಷ್ಟು ಹೆಚ್ಚಳವಾಗುತ್ತದೆ?:
ಏಪ್ರಿಲ್‌ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು ಯಥಾಸ್ಥಿತಿಯಲ್ಲಿಟ್ಟ ನಂತರ, ಈ ವರ್ಷದ ಮೇ 4 ರಿಂದ ರೆಪೊ ಏರಿಕೆ ಮಾಡುವುದನ್ನು ಆರಂಭಿಸಿತ್ತು. ಆರ್‌ಬಿಐ ಈವರೆಗೆ ರೆಪೊ ದರವನ್ನು 225 ಬೇಸಿಸ್ ಪಾಯಿಂಟ್‌ ಹೆಚ್ಚಿಸಿದೆ. ಕಳೆದ ಕೆಲವು ತಿಂಗಳುಗಳಲ್ಲಿ 225 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳ ಎಂದರೆ ಸುಮಾರು 7 ಪ್ರತಿಶತದಷ್ಟು ಬಡ್ಡಿಯನ್ನು ಪಾವತಿಸುತ್ತಿದ್ದ ಸಾಲಗಾರರು ಈಗ 9.25 ಪ್ರತಿಶತದಷ್ಟು ಪಾವತಿಸಬೇಕಾಗಿದೆ.

ಉದಾಹರಣೆಗೆ, ಈ ವರ್ಷದ ಮಾರ್ಚ್‌ನಲ್ಲಿ ಯಾರಾದರೂ 20 ವರ್ಷಗಳ ಅವಧಿಗೆ 30 ಲಕ್ಷ ಗೃಹ ಸಾಲವನ್ನು ಬ್ಯಾಂಕ್ ನಿಂದ ತೆಗೆದುಕೊಂಡಿದ್ದಾರೆ ಎಂದು ಅಂದುಕೊಳ್ಳೋಣ. ಈ ವರ್ಷದ ಏಪ್ರಿಲ್‌ನಲ್ಲಿ ಶೇಕಡ 7ರ ಬಡ್ಡಿದರವು ಈಗ ಶೇಕಡ 9.25ಕ್ಕೆ ಹೆಚ್ಚಾಗುತ್ತದೆ. ಜೊತೆಗೆ ಮೂಲ ಅವಧಿಯೊಳಗೆ ಸಾಲ ಮರುಪಾವತಿಯ ಮೇಲೆ ಈ ಹಿಂದೆ ನೀವು ಪಾವತಿಸುತ್ತಿದ್ದ 23,258 ರೂ. ಇಎಂಐ ಬದಲು ಇನ್ಮುಂದೆ 27,387 ರೂ. ಪಾವತಿಸುವ ಅನಿವಾರ್ಯತೆ ಇರುತ್ತದೆ.

ಆರ್‌ಬಿಐ ರೆಪೊ ದರವನ್ನು ಮತ್ತೆ ಹೆಚ್ಚಿಸಲಿದೆಯೇ?:
ಈ ವರ್ಷ 8 ತಿಂಗಳ ಅವಧಿಯಲ್ಲಿ ಇದು ಐದನೇ ಬಾರಿಗೆ ರೆಪೊ ದರದ ಏರಿಕೆಯಾಗಿದೆ. ಮೇ ತಿಂಗಳಿನಿಂದ ಒಟ್ಟು 225 ಬೇಸಿನ್ ಪಾಯಿಂಟ್ ಹೆಚ್ಚಳಕ್ಕೆ ಕಾರಣವಾಗಿದೆ. ಕಳೆದ ನಾಲ್ಕು ಬಾರಿ ಬರೋಬ್ಬರಿ 50 ಬೇಸಿನ್ ಪಾಯಿಂಟ್ ರೆಪೊ ದರವನ್ನು ಏರಿಕೆ ಮಾಡಲಾಗಿತ್ತು. ಈ ಬಾರಿ ಹೆಚ್ಚಳವು ಕೇವಲ 35 ಬೇಸಿನ್ ಪಾಯಿಂಟ್ ಆಗಿದೆ. ಇದು ಭಾರೀ ಏರಿಕೆಯಿಂದ ಕೊಂಚ ಮಟ್ಟಿಗೆ ನೆಮ್ಮದಿ ನೀಡಬಹುದು ಎಂದು ಹೇಳಲಾಗಿದೆ.

ಆದರೂ, ದೇಶದ ಹಣದುಬ್ಬರವು 6 ಪ್ರತಿಶತಕ್ಕಿಂತ ಹೆಚ್ಚಿರುವುದರಿಂದ ರೆಪೊ ದರ ಏರಿಕೆ ಇಲ್ಲಿಗೆ ಸ್ಥಗಿತಗೊಳ್ಳಲಿದೆ ಎಂಬುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಅಕ್ಟೋಬರ್ ತಿಂಗಳ ಚಿಲ್ಲರೆ ಹಣದುಬ್ಬರವು ಶೇ.6.77ರಷ್ಟಿತ್ತು. ಆದ್ದರಿಂದ, ದೇಶದಲ್ಲಿ ಹಣದುಬ್ಬರ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬರುವವರೆಗೂ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಏನೇ ಆಗಲಿ ರೆಪೊ ದರ ಈಗ ಏರಿಕೆಯಾಗಿರುವುದರಿಂದ ಬ್ಯಾಂಕುಗಳ ಸಹ ಮತ್ತೆ ಬಡ್ಡಿ ದರವನ್ನು ಹೆಚ್ಚಿಸಲಿವೆ. ಇದರಿಂದ ಇಎಂಐ ಪಾವತಿಸಲು ಗ್ರಾಹಕರು ಸಿದ್ಧವಾಗಲೇ ಬೇಕಿದೆ.

Most Read Articles

Kannada
English summary
Rbi gave a big shock to emi payers repo rate increase again
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X